Wednesday, March 7, 2012

ದೇಶದಲ್ಲೇ ಪ್ರಥಮ: 'ರೆಡಿ ಟು ಕುಕ್' ಹಲಸು

ಪಾಕಪ್ರಿಯರಿಗೆ ಸಿಹಿಸುದ್ದಿ. 'ಅಡುಗೆಗೆ ಸಿದ್ಧ'(ರೆಡಿ ಟು ಕುಕ್)ವಾಗಿಯೇ ಅಡುಗೆ ಮನೆಗೆ ಹಲಸು ಅಂಬೆಗಾಲಿಕ್ಕಿದೆ. ಪ್ಯಾಕೆಟ್ ಒಡೆದು ಹೂರಣಕ್ಕೆ ಉಪ್ಪು-ಖಾರ ಸೇರಿಸಿದರೆ ಆಯಿತು. ಅಡುಗೆ ರೆಡಿ! ಎಳೆ ಹಲಸು (ಗುಜ್ಜೆ), ಬಲಿತ ಸೊಳೆ ಮತ್ತು ಬೀಜ - ಮೂರು ವಿಧದ ಪ್ಯಾಕೆಟ್ಗಳು ಅಡುಗೆಗೆ ಸಿದ್ಧವಾಗಿ ಮೊನ್ನೆಯಷ್ಟೇ ಮಾರುಕಟ್ಟೆ ಪ್ರವೇಶಿಸಿವೆ.

ಎಳೆ ಹಲಸಿನ ಹೊರ ಮೈಯ ಮುಳ್ಳನ್ನು ತೆಗೆದು, ಉಳಿದೆಲ್ಲಾ ಭಾಗವನ್ನು 'ಕೊಚ್ಚು ತುಂಡು'ಗಳನ್ನಾಗಿ ಮಾಡಿರುವುದು ಒಂದು ವಿಧ. ಬಲಿತ ಸೊಳೆಯನ್ನು ನೀಟಾಗಿ ಕಟ್ ಮಾಡಿದ್ದು ಇನ್ನೊಂದು. ಹಲಸಿನ ಬೀಜ ನೇರವಾಗಿ ಅಡುಗೆ ಬಳಸಬಹುದಾದಷ್ಟು ಶುಚಿ ಮತ್ತು ನೋಟ. ದೇಶದಲ್ಲೇ ಪ್ರಥಮವಾದ ಈ ಸಾಧನೆ ಮಾಡಿದ್ದು ಕೇರಳದ ಪತ್ತನಾಂತಿಟ್ಟದ ಕಾರ್ಡ್ ಕೃಷಿ ವಿಜ್ಞಾನ ಕೇಂದ್ರ.

ಪೇಟೆಯ ಅಮ್ಮಂದಿರಿಗೆ ನಿಜಕ್ಕೂ ಖುಷಿ. ಹಲಸಿನ ಕಾಯನ್ನು ತರುವ ಸಾಹಸವಿಲ್ಲ. ತುಂಡರಿಸಿ, ಮೇಣ ಮೆತ್ತಿಸಿಕೊಂಡು; ಸೊಳೆ ತೆಗೆವ, ಬೀಜ ಬೇರ್ಪಡಿಸುವ ಕಷ್ಟವಿಲ್ಲ. ಚಿಕ್ಕ ಕುಟುಂಬಕ್ಕೆ ದೊಡ್ಡ ಗಾತ್ರದ ಕಾಯಿ ಹೊರೆ. ಕಟ್ ಮಾಡಲು ಸಮಯವಿಲ್ಲ. ಬಹುತೇಕರಿಗೆ ಗೊತ್ತಿಲ್ಲ ಬಿಡಿ. ತುಂಡರಿಸಿ ಉಳಿದವನ್ನು ತಂಪುಪೆಟ್ಟಿಗೆಯಲ್ಲಿಟ್ಟರೂ ಹೆಚ್ಚು ದಿನ ತಾಳದು. ಹಾಳಾದರೂ ತೊಂದರೆಯಿಲ್ಲ, ನೆರೆಮನೆಯವನಿಗೆ ಕೊಡುವ ಪ್ರಮೇಯವಂತೂ ಇಲ್ಲವೇ ಇಲ್ಲ! ಇನ್ನು ಒದ್ದಾಡಬೇಕಿಲ್ಲ, 'ರೆಡಿ ಟು ಕುಕ್' ಹಲಸು ಬಂದಿದೆ. ಒಂದರ್ಥದಲ್ಲಿ ಹಲಸಿಗೆ ಶಾಪ ವಿಮೋಚನೆ!

ಬಹುತೇಕ ತರಕಾರಿಗಳು ವಿಷದಲ್ಲಿ ಮಿಂದೆದ್ದೇ ಅಡುಗೆ ಮನೆ ಸೇರುತ್ತವೆ. ಹಲಸು ವಿಷ ಸಿಂಪಡಣೆಯನ್ನು, ಗೊಬ್ಬರವನ್ನು ಬೇಡದ ತರಕಾರಿ. ಈ ಹಿನ್ನೆಲೆಯಲ್ಲಿ 'ಅಡುಗೆಗೆ ಸಿದ್ಧ' ಹಲಸಿಗೆ ನಗರದಲ್ಲಿ ಹೆಚ್ಚು ಗ್ರಾಹಕೊಲವು ಸಿಗಬಹುದು. ಹೆಚ್ಚು ಸಂರಕ್ಷಕಗಳನ್ನು ಬಳಸದ ಇದರಲ್ಲಿ ನಾರಿನಂಶ, ವಿಟಾಮಿನ್ ಗಳು ಇವೆ. ಮಧುಮೇಹದವರಿಗೆ ಇದು ತುಂಬ ಒಳ್ಳೆ ಆಹಾರ.

ಕಾರ್ಡ್ ಕೆವಿಕೆ ಈ ಯೋಜನೆಯ ಉದ್ದೇಶ 'ಮಾಡಿ ತೋರಿಸುವುದು' ಅಷ್ಟೇ. ಈಗ ಸಣ್ಣ ರೀತಿಯಲ್ಲಿ ಉತ್ಪನ್ನಗಳು ಮಾರುಕಟ್ಟೆ ಸೇರಿವೆಯಷ್ಟೇ. ಹಳ್ಳಿಗಳಲ್ಲಿ ಇಂತಹ ಘಟಕಗಳಿಗೆ ಅವಕಾಶ ಹೆಚ್ಚು. ತಂತ್ರಜ್ಞಾನದ ತಲೆ ನೋವಿಲ್ಲ. ಅರಿವು ಮೂಡಿಸುವ ಕೆಲಸ ಆಗಬೇಕಷ್ಟೇ. ಮಾರುಕಟ್ಟೆಯಲ್ಲಿರುವ ದೊಡ್ಡ ಮಿತಿಯೆಂದರೆ ಅದರ ತಾಳಿಕೆ. ತೆರೆದ ವಾತಾವಾರಣದಲ್ಲಿ ಒಂದೇ ದಿನ ಆಯುಷ್ಯ. ತಂಪುಪೆಟ್ಟಿಗೆಯಲ್ಲಾದರೆ ಮೂರು ದಿನ.

ಕಾಲು ಕಿಲೋ 'ಸಿದ್ಧ ಹಲಸು' ಪ್ಯಾಕೆಟ್ಗೆ ಇಪ್ಪತ್ತು ರೂಪಾಯಿ. ಥರ್ಮಾಕೋಲ್ ಟ್ರೇಯಲ್ಲಿಟ್ಟ ಉತ್ಪನ್ನಕ್ಕೆ ಕ್ಲಿಂಗ್ಫಿಲ್ಮಿನ ಪಾರದರ್ಶಕ ಅಂಗಿ. ಊರಿನ ಸ್ತ್ರೀಶಕ್ತಿ ಸಂಘಗಳು ಮೌಲ್ಯವರ್ಧನೆಗೆ ಮುಂದಾಗಬಹುದು. ವರುಷದಲ್ಲಿ ನಾಲ್ಕಾರು ತಿಂಗಳು ನಡೆಸಬಹುದಾದ ಉದ್ದಿಮೆ.

ಮಲೆನಾಡಿನಲ್ಲಿ ತುಳುವ, ಬಿಳುವ.. ಜಾತಿಯ ಹಲಸು ಜಗಲಿ ಸೇರುವುದಿಲ್ಲ. ಈ ಉದ್ದಿಮೆಯಲ್ಲಿದಕ್ಕೆ ಅವಕಾಶಗಳು ಹೇರಳ. ಹಲಸಿನ ರುಚಿ ಗೊತ್ತಿದ್ದ ಪೇಟೆ ಮಂದಿಗೆ 'ಅಡುಗೆಗೆ ಸಿದ್ಧ' ಹಲಸಿನ 'ಬಾಯಿರುಚಿ' ಒಮ್ಮೆ ಸಿಕ್ಕಿತೆಂದರೆ ಉತ್ಪನ್ನ ಗೆದ್ದಂತೆ. ಹಳ್ಳಿಯ ಮಲ್ಲಿಗೆ ಹೂ ನಗರಕ್ಕೆ ಹೋಗುತ್ತದಲ್ಲಾ, ಅಂತಹ ಮಾರಾಟ ಸರಪಳಿಯನ್ನು ಬೆಸೆಯಬಹುದೇನೋ?

ಕೇವೀಕೆ ಈ ಉತ್ಪನ್ನ ತಯಾರಿಯ ವಿಧಾನವನ್ನು ಇನ್ನೂ ಸುಧಾರಿಸಿ ಬೇಗನೆ ಸ್ಟಾಂಡರ್ಡೆೈಸ್ ಮಾಡಬೇಕೆಂದಿದೆ. ಏನಿದ್ದರೂ ಮಾಡಿದ ಕೆಲಸ ದೊಡ್ಡದು. ಹಲಸು ಬೆಳೆಯುವ ಪ್ರದೇಶಕ್ಕೆಲ್ಲಾ ಹೊಸ ಪಾಠ. ದೊಡ್ಡ ಯಂತ್ರ, ಎಕ್ರೆಗಟ್ಟಲೆ ಜಾಗ, ಕೋಟಿಗಟ್ಟಲೆ ಬಂಡವಾಳ ಬೇಡ. ಸ್ಥಳೀಯವಾಗಿಯೇ ಮಾರಾಟವಾಗುವ ಅವಕಾಶ. ಜನಸಾಮಾನ್ಯರೂ ಕೂಡಾ ಖರೀದಿಸಿ ತಿನ್ನಬಹುದಾದುದು. ಪತ್ತನಾಂತಿಟ್ಟದ ಕಾರ್ಡ್ ಕೆವಿಕೆ (cardkvk@yahoo.com ಹಲಸಿನ ಮೌಲ್ಯವರ್ಧನೆಯಲ್ಲಿ ಗಣನೀಯ ಕೆಲಸ ಮಾಡಿದೆ.

ನೆರೆಯ ಕಾಸರಗೋಡು ಜಿಲ್ಲೆಯ ಕುಂಡಂಕುಳಿಯ ಚೇರಿಪ್ಪಾಡಿ ಜಲಾನಯನ ಯೋಜನಾ ವ್ಯಾಪ್ತಿಯ ಕೃಷಿಕರು ಹಲಸಿನ ಸಂಸ್ಕರಣೆಯತ್ತ ಆಸಕ್ತಿ ಹೊಂದಿದ್ದಾರೆ. ಕಳೆದ ವರ್ಷ ಪ್ರಾಯೋಗಿಕವಾಗಿ ಬಲಿತ ಹಲಸಿನ ಸೊಳೆ ಬೇರ್ಪಡಿಸಿ ಅದನ್ನು 'ರೆಡಿ ಟು ಕುಕ್' ಪ್ಯಾಕೆಟ್ ತಯಾರಿಸಿದ್ದಾರೆ. ಯಾವುದೇ ಆರೈಕೆ ಇಲ್ಲದೆ ಒಂದು ದಿನ ತಾಳಿಕೊಳ್ಳಬಹುದು ಎಂದು ಪರೀಕ್ಷೆಯಿಂದ ಕಂಡುಕೊಂಡಿದ್ದಾರೆ. ಈ ಋತುವಿನಲ್ಲಿ ಪ್ರಾಯಃ ಮಾರುಕಟ್ಟೆ ಪ್ರವೇಶಿಸಬಹುದು.

ಕೇರಳದ ಕೋಟ್ಟಯಂ ಜಿಲ್ಲೆಯ ಜೋಸೆಫ್ ಲುಕೋಸ್ ತಮ್ಮ 'ಗ್ರಾಮ' ಸಂಸ್ಥೆಯ ಮೂಲಕ ಹಲಸಿನ ಮೂವತ್ತಕ್ಕೂ ಮಿಕ್ಕಿ ಉತ್ನನ್ನಗಳನ್ನು ತಯಾರಿಸುತ್ತಾರೆ. ದೇಶಾದ್ಯಂತ ಗ್ರಾಹಕರು. ಹಲಸಿನ ಒಣ ಸೊಳೆಗೆ ಮೊದಲ ಮಣೆ. ಒಂದು ವರುಷ ತಾಳಿಕೆ. ವರುಷವಿಡೀ ಬಳಕೆ. ಒಣ ಕಾಯಿಸೊಳೆ ಮತ್ತು ಬೀಜದ ಹುಡಿಗೆ ಹುರಿದ ತೆಂಗಿನ ತುರಿ ಸೇರಿಸಿ ಮಾಡಿದ 'ಅವಲೋಸ್ ಪುಡಿ' ಜನಪ್ರಿಯ. ಪ್ರತೀ ವರುಷವೂ ಹೊಸ ಉತ್ಪನ್ನಗಳ ಹುಡುಕಾಟ. ಆಹಾರ ಸಂಸ್ಕರಣಾ ರಂಗದಲ್ಲಿ ಕೃಷಿಕ ಲುಕೋಸ್ ಅವರ ಗಟ್ಟಿ ಅನುಭವವೇ ಯಶಸ್ಸಿಗೆ ಕಾರಣ.

ಪಾಲಕ್ಕಾಡು ಜಿಲ್ಲೆಯ ಕಾಂಞಿರಪುಳದ ಕೃಷಿಕ ಜೇಮ್ಸ್ ಪಿ.ಮ್ಯಾಥ್ಯೂ ಅವರದು ಹಲಸಿನ ಮೌಲ್ಯವರ್ಧನೆಯಲ್ಲಿ ಗುರುತರ ಕೆಲಸ. ಒಣ ಹಣ್ಣು, ಒಣ ಕಾಯಿಸೊಳೆ, ಒಣಗುಜ್ಜೆ - ಪ್ರಮುಖ ಉತ್ಪನ್ನಗಳು. 'ನಾಲ್ಕೂವರೆ ಕಿಲೋ ಹಸಿ ಸೊಳೆಗೆ ಒಂದು ಕಿಲೋ ಒಣಸೊಳೆ. ಒಂದು ಕಿಲೋ ಒಣ ಗುಜ್ಜೆಗೆ ಹದಿಮೂರು ಕಿಲೋ ಹಸಿ ಗುಜ್ಜೆ' ಅವರ ಸೂಕ್ಷ್ಮ ಲೆಕ್ಕಾಚಾರ. ಹಲಸಿನ ಉತ್ಪನ್ನಗಳನ್ನು ಎಲ್ಲರೂ ಬಳಸುವಂತಾಗಬೇಕು ಎನ್ನುವುದು ಗುರಿ. ವ್ಯಾಪಾರಿ ಉದ್ದೇಶ ಅಲ್ಲ. ನಡೆಯುವ ಮೇಳಗಳಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯಿಸುವುದು ಅವರಿಗೆ ಖುಷಿ.

ತ್ರಿಶೂರಿನ ಮನ್ನುತ್ತಿಯ ಕೇರಳ ವಿವಿಯ ತೋಟಗಾರಿಕಾ ವಿಭಾಗ ಪ್ರಾಯೋಗಿಕವಾಗಿ 'ತಿನ್ನಲು ಸಿದ್ಧ - ಗುಜ್ಜೆ ಪಲ್ಯ'ವನ್ನು ತಯಾರಿಸಿದೆ. ಮೂರು ದಿವಸದ ತಾಳಕೆ. ತಂಪುಪೆಟ್ಟಿಗೆಯಲ್ಲಿಟ್ಟರೆ ಬರೋಬ್ಬರಿ ಒಂದು ವಾರ. ಕೊಂಡು ಒಗ್ಗರಣೆ ಹಾಕಿ ಬಿಸಿ ಮಾಡಿದರೆ ಸಾಕು, ನೇರ ಬಟ್ಟಲಿಗೆ! ಇನ್ನೂರು ಗ್ರಾಮಿನ ಪೊಟ್ಟಣಕ್ಕೆ ಹತ್ತು ರೂಪಾಯಿ.

ಅತ್ತ ಶ್ರೀಲಂಕಾ ಹಲಸಿನ 'ಅಡುಗೆಗೆ ಸಿದ್ಧ' ಉತ್ಪನ್ನಗಳಲ್ಲಿ ಮುಂದಿದೆ. ಅಲ್ಲದು ಗೃಹ ಉದ್ದಿಮೆ. ನೇರವಾಗಿ ಉಪ್ಪು, ಮೆಣಸು, ಮಸಾಲೆ ಹಾಕಿ ಅಡುಗೆ ಮಾಡುವಷ್ಟು ಸಿದ್ಧ ರೂಪ. ಖರೀದಿಸಿದ ಅಮ್ಮಂದಿರಿಗೆ ಎಷ್ಟು ಸಲೀಸು ನೋಡಿ. ಒಲೆಯಲ್ಲಿಟ್ಟು ಬೇಯಿಸಲು ತಯಾರಾದರೆ ಆಯಿತು.

ಶ್ರೀಲಂಕಾದ 'ಕಿಂಡೂರಿ ಪ್ರಾಡಕ್ಟ್ಸ್' ಒಂದು ಗೃಹ ಉದ್ದಿಮೆ. ತರಕಾರಿಗೆ ಹೊಂದುವ ಮೂರು ವಿಧದ ಹಲಸು ಮತ್ತು ಹಲಸಿನ ಹಣ್ಣಿನ ಸೊಳೆಗಳ ಇನ್ನೂರೈವತ್ತು ಗ್ರಾಮ್ಗಳ ಪ್ಯಾಕೆಟ್. ಎಲ್ಲವೂ ಕೈಚಾಲಿತ. ಆರಂಭದ ದಿವಸಗಳಲ್ಲಿ ದಿವಸಕ್ಕೆ ಮೂರು ಕಿಲೋ 'ಸಿದ್ಧ ಹಲಸು' ಮಾರಾಟ ಮಾಡುತ್ತಿದ್ದ ಕಿಂಡೂರಿ, ಈಗ ನಾಲ್ಕೈದು ಪಟ್ಟು ವಿಸ್ತರಿಸಿದೆ. ಹಲಸಿನ ಬೀಜವನ್ನು ಕತ್ತರಿಸಿ 'ರೆಡಿ ಟು ಕುಕ್' ಪ್ಯಾಕೆಟ್ಗೆ ಸೇರಿಸುತ್ತಿದೆ. ಐದು ಮಂದಿಯ ನಾಲ್ಕು ತಾಸು ದುಡಿತ. ನಿತ್ಯ ಐವತ್ತು ಪ್ಯಾಕೆಟ್ ತಯಾರಿ.

'ಇದೆಲ್ಲಾ ನಮಗೆ ಸಾಧ್ಯವಾ,' - ಹೊಸ ವಿಚಾರಗಳಿಗೆ ಶ್ರೀಕಾರ ಹಾಕುವಾಗ ನಮ್ಮಲ್ಲಿ ಬರುವ ಅಡ್ಡ ಮಾತು. ಕೇರಳದ ಹಳ್ಳಿಗಳಲ್ಲಿ ಸಾಧ್ಯವಾಗಿದೆ, ದೂರದ ಶ್ರೀಲಂಕಾದಲ್ಲಿ ವೃತ್ತಿಯಾಗಿದೆ. ಕನ್ನಾಡು ಯಾಕೋ.. ಹಲಸಿನ ಮೌಲ್ಯವರ್ಧನೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿಲ್ಲ. 'ಕೇರಳ-ಕರ್ನಾಟಕದ ನಡುವೆ ಹೋಲಿಸಿದರೆ ಇಡೀ ಕೇರಳ ರಾಜ್ಯವು ಹಲಸಿನ ವಿಚಾರದಲ್ಲಿ ಮುಂದೆ ಹೋಗುತ್ತಿದೆ.

ಜನಸಮುದಾಯ, ಆಡಳಿತವೂ ಸೇರಿದ ಹಾಗೆ ಹಲಸಿನ ಬಗೆಗಿನ ಹೊಸ ಉಮೇದು ಮಾಧ್ಯಮಗಳಲ್ಲೂ ಪ್ರತಿಫಲಿಸುತ್ತಿದೆ. ಹಲಸಿನ ಬಗ್ಗೆ ಇಡೀ ಕೇರಳ ಎದ್ದು ನಿಂತಂತಿದೆ. ಆ ಮಟ್ಟದ ಆಸಕ್ತಿ ಕನ್ನಾಡಿನಲ್ಲಿ ಕಂಡು ಬರುತ್ತಿಲ್ಲ,' ಹಲಸು ಆಂದೋಳನದ ರೂವಾರಿ 'ಶ್ರೀ' ಪಡ್ರೆ ವಿವರಿಸುತ್ತಾರೆ. ಅದೇನೇ ಇದ್ದರೂ, ಹಲಸಿನ ಅಭಿವೃದ್ಧಿಯ ಇಳಿಲೆಕ್ಕ ಆರಂಭವಾಗಿದೆ, 2012ನ್ನು ಕಾದು ನೋಡಿ ಎನ್ನುತ್ತಾ ನಸುನಗುತ್ತಾರೆ.

0 comments:

Post a Comment