Sunday, November 8, 2015

ನೇರಳೆಯ ನೆರಳು ಎಬ್ಬಿಸಿದ ಹಸಿರು ಜ್ಞಾನ


              ಪೆರ್ಲ-ಬಜಕೂಡ್ಲು ದೇವಳದ ಸನಿಹ ನೇರಳೆ ಹಣ್ಣಿನ ಮರ. ಮಕ್ಕಳನ್ನು ಸೆಳೆದ ಹಿರಿಯಜ್ಜ. ಆಗಸದೆತ್ತರಕ್ಕೆ ಏರಲಾರರರು ಎಂದು ಗೊತ್ತಿದ್ದೇ ಗೊಂಚಲು ಗೊಂಚಲು ಹಣ್ಣುಗಳನ್ನು ಬಿಡುತ್ತಿತ್ತು. ಬುಡದಲ್ಲಿ ಬಣ್ಣದ ಚಿತ್ತಾರದ ಬಿನ್ನಾಣ. ಊರಿನ ಕಿರಿಯ-ಹಿರಿಯರ ಬದುಕಿಗದು ಸಾಕ್ಷಿ. ಮಂತ್ರದ ನಾದದ ನಿನಾದಕ್ಕೆ ಕಿವಿಯಾಗಿ ಸದೃಢವಾಗಿ ಬೆಳೆದಿತ್ತು.
ಬ್ರಹ್ಮಕಲಶೋತ್ಸವದ ಸಂದರ್ಭ. ಅಭಿವೃದ್ಧಿಯ ನೀಲನಕಾಶೆ ಸಿದ್ಧವಾದಾಗ ಮರವನ್ನು ತೆಗೆಯುವ ನಿರ್ಧಾರ. ಕಡಿಯದಿದ್ದರೆ ಅಭಿವೃದ್ಧಿ ಕೆಲಸಗಳಿಗೆ ತೊಡಕು. ಅಂದು ನೇರಳೆಯ ತಂಪು ನೆರಳಿನಲ್ಲಿ ಬಿಸಿಯುಸಿರು. ಧರೆಗುರುಳಿದಾಗ ಊರಿನ ಮಂದಿಗೆ ರಕ್ತ ಸಂಬಂಧಿಯನ್ನು ಕಳೆದುಕೊಂಡ ಭಾವ-ಅನುಭಾವ.
             ಊರಿನ ಭಾವಜೀವಿಗಳ ಮನದೊಳಗೆ ನೇರಳ ಮರ ಆಳವಾಗಿ ಬೇರುಬಿಟ್ಟಿತ್ತು. ಕರುಳಬೇರನ್ನೇ ತುಂಡರಿಸಿದ ಅಪರಾಧಿ ಭಾವ. ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ. ದೇವಳದ ಜಾಗದಲ್ಲಿ ವನವೊಂದನ್ನು ಎಬ್ಬಿಸುವ ಸಂಕಲ್ಪ. ನೂರಾರು ಮಂದಿ ಖುಷಿಯಿಂದ ಸ್ಪಂದಿಸಿದರು. ಪರಿಣಾಮ, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ.
               "ಪೂಜಾ ಕೈಂಕರ್ಯಕ್ಕೆ ಬೇಕಾದ ಪತ್ರೆಗಳು, ಹೂಗಳು, ಸಮಿತ್ತುಗಳು ಸಿಗುವಂತಿರಬೇಕು. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹೊಸದಾಗಿ ಧ್ವಜಮರ(ಕೊಡಿಮರ)ಕ್ಕೆ ಮರವನ್ನು ಬೇರೆಡೆಯಿಂದ ತರಲಾಗಿತ್ತು. ಮುಂದಿನ ಬ್ರಹ್ಮಕಲಶದ ಸಂದರ್ಭದಲ್ಲಿ ನಮ್ಮ ಮರವೇ ಕೊಡಿಮರವಾಗಬೇಕು, ಎನ್ನುವ ದೂರದೃಷ್ಟಿ ಹೊಂದಿದ್ದಾರೆ" ಉಮೇಶ್ ಕೆ. ಪೆರ್ಲ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕ. ದೇವಳದ ಹಸಿರು ಕೈಂಕರ್ಯದ ಜವಾಬ್ದಾರಿ ಹೆಗಲಿಗೇರಿಸಿಕೊಂಡವರು.
                ಒಂದೂವರೆ ಎಕ್ರೆ ಪ್ರದೇಶದಲ್ಲಿ ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಗಿದೆ. ಕದಂಬ, ನೇರಳೆ, ಶ್ರೀಗಂಧ, ಅಶ್ವತ್ಥ, ಬಿಲ್ವ... ಹೀಗೆ. ಇಲ್ಲಿರುವ ಒಂದೊಂದು ಗಿಡಗಳ ಹಿಂದೆ ಸು- ಮನಸ್ಸಿದೆ, ಉದ್ದೇಶವಿದೆ. ಗಿಡದಿಂದ ಗಿಡಕ್ಕೆ ಇಪ್ಪತ್ತು ಅಡಿಗಳ ಅಂತರ. ಯಾವ್ಯಾವ ಸಾಲಿನಲ್ಲಿ ಯಾವ ಜಾತಿಯ ಮರ ಇರಬೇಕೆಂದು ಮೊದಲೇ ಗೊತ್ತು ಮಾಡಿದ್ದಾರೆ. ಇದರ ಲಿಖಿತ ದಾಖಲಾತಿಯೂ ಇದೆ. ಗಿಡಗಳ ಪರಿಚಯಕ್ಕಾಗಿ ಲೇಬಲ್ ಅಂಟಿಸಿದ್ದಾರೆ.
                'ನಮ್ಮದೂ ಒಂದು ಗಿಡವಿರಬೇಕು' ಎಂದಾದರೆ ಐನೂರು ರೂಪಾಯಿ ನಿರ್ವಹಣೆ ಶುಲ್ಕ ನೀಡಿ,  ಯಾವ ಗಿಡ ಎಂದು ಸೂಚಿಸಿದರಾಯಿತು. ಈ ಮೊತ್ತದಲ್ಲಿ ಗಿಟ ನೆಟ್ಟು, ಆರೈಕೆ ಮಾಡಲಾಗುತ್ತದೆ. ದೇವಳದ ಇನ್ನಿತರ ಸೇವೆಗಳ ಮಧ್ಯೆ ಇದನ್ನು 'ಹಸಿರು ಸೇವೆ' ಎಂದು ಹೊಸದಾಗಿ ನಾಮಕರಣ ಮಾಡಿದರೆ ಹೇಗೆ? ಹಸಿರು ಎಲ್ಲರಿಗೂ ಉಸಿರು ತಾನೆ. "ಈಗಾಗಲೇ ನೂರಕ್ಕೂ ಮಿಕ್ಕಿ ಮಂದಿ ಸ್ಪಂದಿಸಿದ್ದಾರೆ. ಇನ್ನಷ್ಟು ಮಂದಿ ಉತ್ಸುಕತೆ ತೋರಿದ್ದಾರೆ. ಈ ಕುರಿತು ಪ್ರತ್ಯೇಕ ಸಮಿತಿ ರೂಪಿಕರಿಸಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಯೋಚನೆಯಿದೆ, ಎನ್ನುತ್ತಾರೆ ಉಮೇಶ್. ದೇವಳದ ಮೊಕ್ತೇಸರರಾದ ಕೃಷ್ಣ ಶ್ಯಾನುಭಾಗ್ ಹೆಗಲೆಣೆ.
                 2015 ಜುಲಾಯಿ ತಿಂಗಳಲ್ಲಿ ಗಿಡವನ್ನು ನೆಡಲಾಗಿದೆ. ಗಿಡಗಳ ಪಕ್ಕ ಚಿಕ್ಕ ಇಂಗುಗುಂಡಿ. ಒಂದೂವರೆ ಎಕ್ರೆಗೆ ಜೀವಂತ ಬೇಲಿ ನಿರ್ಮಾಣ ಮಾಡಿದ್ದಾರೆ. ಹೆಚ್ಚು ಆರ್ಥಿಕ ಹೊರೆ ಬೇಡುವ ಕೆಲಸ. ಗಿಡ ನೆಡುವ, ಗೊಬ್ಬರ ಹಾಕುವ  ಚಿಕ್ಕಪುಟ್ಟ ಕೆಲಸಗಳಿಗೆ ವಿದ್ಯಾರ್ಥಿಗಳ ಸಹಕಾರ. ಉದ್ಯೋಗ ಖಾತರಿ ಯೋಜನೆಯ ಸದಸ್ಯರ ಶ್ರಮವನ್ನೂ ಬಳಸಿಕೊಳ್ಳಲಾಗಿದೆ. ಊರವರ ಶ್ರಮ ಗುರುತರ. ಮಕ್ಕಳ ಹುಟ್ಟುಹಬ್ಬ, ಹಿರಿಯ ನೆನಪು, ಶುಭಸಮಾರಂಭಗಳ ದಿವಸಗಳಂದು ಗಿಡಗಳನ್ನು ನೆಡುವ ಆಶಯವನ್ನು ಹಲವರು ಅನುಷ್ಠಾನ ಮಾಡಿದ್ದಾರೆ.
                 ಈಗಿನ ವೇಗ ನೋಡಿದರೆ ವನವನ್ನು ಪುನಃ ಒಂದೆಕ್ರೆ ವಿಸ್ತಾರಗೊಳಿಸುವ ಮಾನಸ ನೀಲನಕ್ಷೆ ಸಿದ್ಧವಾಗಿದೆ. ಹಸಿರಿನ ಮಧ್ಯೆ ಗಾಢ ಹಸಿರನ್ನು ಎಬ್ಬಿಸುವ ದೇವಳದ ಕೈಂಕರ್ಯ ನಿಜಕ್ಕೂ ಮಾದರಿ. ಅಳಿವಿನಂಚಿಗೆ ಜಾರುತ್ತಿರುವ ತಳಿಗಳನ್ನು ನೆಟ್ಟು ಉಳಿಸಲು ಇಂತಹ ಆಂದೋಳನಗಳಿಂದ ಸಾಧ್ಯ. ಒಂದು ನೇರಳೆ ಮರ ಕಟ್ಟಿಕೊಟ್ಟ ಹಸಿರಿನ ಜ್ಞಾನವು ಬಜಕೂಡ್ಲನ್ನು ಆವರಿಸಿದೆ ಎಂದಾದರೆ ಉಳಿದೆಡೆ ಯಾಕೆ ಸಾಧ್ಯವಿಲ್ಲ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ತನ್ನ ಸೀಮೆಯಲ್ಲೂ ಹಸಿರೆಬ್ಬಿಸುವ ಕೆಲಸ ಮಾಡಿದೆ.
               ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯು ಪೆರ್ಲ ಪೇಟೆಯಲ್ಲಿದೆ. ಕನ್ನಾಡಿನ ಸರಹದ್ದಿನಲ್ಲಿರುವ ಶಾಲೆಗೆ ಸುಮಾರು ಹನ್ನೆರಡೆಕ್ರೆ ಸ್ವಂತ ಭೂಮಿ. ಶಾಲೆಯ ಕಟ್ಟಡವು ಗುಡ್ಡದ ತಳ ಮತ್ತು ಮೇಲೆ ನಿರ್ಮಾಣವಾಗಿದೆ. ಪೂರ್ತಿ ಮುರಕಲ್ಲಿನ (ಲ್ಯಾಟರೈಟ್) ಹಾಸು. ಒಂದೂವರೆ ದಶಕದ ಹಿಂದಿನ ಆ ದಿನವನ್ನು ಉಮೇಶ್ ಜ್ಞಾಪಿಸಿಕೊಂಡರು. ಮನೆಯಿಂದ ಮಧ್ಯಾಹ್ನ ಶಾಲೆಗೆ ಬರುತ್ತಿದ್ದೆ. ವಿದ್ಯಾರ್ಥಿಗಳು ಡಾನ್ಸ್ ಪ್ರಾಕ್ಟಿಸ್ ಮಾಡುತ್ತಿದ್ದರು. ಪಾದೆಯೂ (ಮುರಕ್ಕಲ್ಲು) ಬಿಸಿ, ಸೂರ್ಯನ ಬಿಸಿ. ಮಕ್ಕಳು ಬೆವರು ಸುರಿಸುತ್ತಾ ಕಷ್ಟ ಪಡುವುದನ್ನು ನೋಡಿ ಸಂಕಟ ಪಟ್ಟೆ. ಹಸಿರೆಬ್ಬಿಸುವ ಸಂಕಲ್ಪದ ಬೀಜ ಅಂದು ಬಿತ್ತಲ್ಪಟ್ಟಿತು. ವಿದ್ಯಾರ್ಥಿಗಳ ಬಿಸಿಲಿನ ಸ್ನಾನವು ಆಗಿನ ಮುಖ್ಯೋಪಾಧ್ಯಾಯ ಶಿವಕುಮಾರ್ ಅವರ ಮನತಟ್ಟಿತು.
                  1998. ಶಾಲೆಯಲ್ಲಿ 'ನೇಚರ್ ಕ್ಲಬ್' ಉದ್ಘಾಟನೆ. ಅಪ್ಪಟ ಪರಿಸರವಾದಿ ದಿ.ಶಂಪಾ ದೈತೋಟರಿಂದ ಶುಭ ಚಾಲನೆ. ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಹಸಿರೆಬ್ಬಿಸುವ ಸತ್ಸಂಕಲ್ಪ. ಕಾರ್ಯಕ್ರಮ ಮುಗಿಯುವಾಗ ಎಲ್ಲರ ಮನದಲ್ಲೂ ಹಸಿರೆದ್ದಿತ್ತು. ಶಂಪಾರ ಪರಿಸರದ ಪಾಠವು ಮಕ್ಕಳ ಮತಿಗೆ ನಿಲುಕಿತ್ತು, ಸಿಲುಕಿತ್ತು. ಹದಿನೇಳು ವರುಷವಾಯಿತು. ಈಗ ನೋಡಿ, ಬೋಳು ಮುರಕಲ್ಲಿನ ಮೇಲೆ ಎದ್ದ ಹಸಿರು ಸಂಪತ್ತು.
              ಆಗ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ನೋಡಿದರೆ ನಂಬಲಾಗದಷ್ಟು ಪರಿವರ್ತನೆ. ಗಿಡ, ಪೊದೆ, ಮರಗಳ ರಾಶಿ. ಎರಡು ಕಡೆ ಸುಮಾರು ನಾಲ್ಕೆಕರೆಯಲ್ಲಿ ಗಾಢ ಕಾಡು ಬೆಳೆದಿದೆ. ಹಲಸು, ಹೆಬ್ಬಲಸು, ಚಂದಳಿಕೆ, ಅಶ್ವತ್ಥ, ನೇರಳೆ, ಮಂದಾರ, ಗೋಳಿ, ಮಹಾಗನಿ, ಮರುವ.. ಮೊದಲಾದ ಮರಗಳಿವೆ. ಅರಣ್ಯ ಇಲಾಖೆಯ ಹಸಿರು ಪ್ರೀತಿಯ ಅಧಿಕಾರಿಗಳನ್ನೂ ಕಾಡು ಸೆಳೆದಿದೆ. ಏನಿಲ್ಲವೆಂದರೂ ಇನ್ನೂರೈವತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ಮರ, ಗಿಡಗಳಿವೆ. ಕಲ್ಲಿನ ಮಧ್ಯೆ ಅಲ್ಲಿಲ್ಲಿ ಇದ್ದ ಮಣ್ಣಿನಲ್ಲಿ ಮರಗಳು ಬೇರಿಳಿಸಿಕೊಂಡಿವೆ.
             ಕಳೆದ ವಾರವಷ್ಟೇ ಕಾಡಿನ ಮಧ್ಯೆ ಓಡಾಡುತ್ತಿದ್ದಾಗ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದರು. "ಈಗ ನೋಡಿ ಮಕ್ಕಳಿಗೆ ಪ್ರಕೃತಿಯ ಮಧ್ಯೆಯೇ ಪಾಠ, ಆಟ. ಸಹಜ ನೆರಳು, ಗಾಳಿ. ಮಕ್ಕಳು ಖುಷ್. ಇಷ್ಟೇ ಅಲ್ಲ. ಮರದ ನೆರಳಿನಲ್ಲಿ ಸಣ್ಣ ಕಾರ್ಯಕ್ರಮ ಮಾಡಬಹುದಾದ ವೇದಿಕೆ ನಿರ್ಮಿಸಬೇಕೆಂದಿದೆ," ಎಂದರು ಉಮೇಶ್. ಇವರು ನೇಚರ್ ಕ್ಲಬ್ಬಿಗೆ ದೊಡ್ಡ ಹೆಗಲನ್ನು ನೀಡಿದ್ದರು. ಈಗ ಆ ಜವಾಬ್ದಾರಿಯನ್ನು ಅಧ್ಯಾಪಕ ಪ್ರವೀಣ್ ನಿಭಾಯಿಸುತ್ತಾರೆ.
              ಇಷ್ಟಾಗಬೇಕಾದರೆ ಅಧ್ಯಾಪಕರ ತನುಶ್ರಮ ಗಮನೀಯ. ಹಲವರ ಗೇಲಿ ಮಾತುಗಳನ್ನು ಕೇಳುತ್ತಾ, ನೆಟ್ಟ ಗಿಡವು ಅನ್ಯರ ಪಾಲಾದಾಗ ಮರುಗುತ್ತಾ, ಪಶುಗಳು ನಾಶ ಮಾಡಿದಾಗ ಪುನಃ ನೆಡುತ್ತಾ, ಹಸಿರಿನ ಅರಿವಿಲ್ಲದ ಮಂದಿ ಗಿಡಗಳನ್ನು ಕಿತ್ತು ಬಿಸಾಕಿದಾಗ ಕಣ್ಣೀರು ಹಾಕುತ್ತಾ.. ಹೀಗೆ ಸಾಗಿ ಬಂದ ದಿನಗಳು ಕಷ್ಟದಾಯಕ. ಶತಯತ್ನ ರಕ್ಷಣೆ ಮತ್ತು ಆರೈಕೆಯ ಫಲವಾಗಿ ರೂಪುಗೊಂಡ ಪೆರ್ಲ ಶಾಲೆಯ ಕಾಡಿನ ಕತೆ ನಾಡಿಗೆ ಮಾದರಿ. ನಿಜಾರ್ಥದ ಹಸಿರು ಸೇವೆ. ಈಗಿನ ಮುಖ್ಯಗುರು ಸುಬ್ರಹ್ಮಣ್ಯ ಶಾಸ್ತ್ರಿ, ಅಧ್ಯಾಪಕ ವೇಣುಗೋಪಾಲ, ಅಧ್ಯಾಪಕರ ವೃಂದ, ಪಾಲಕರು.. ಹೀಗೆ ಹಲವರ ಶ್ರಮವು ಕಾಡಿಗೆ ರಕ್ಷೆ.
             1998ರ ಸುಮಾರಿಗೆ ಮೇ ತಿಂಗಳಲ್ಲಿ ಶಾಲೆಯ ಬಾವಿ ಒಣಗುತ್ತಿತ್ತು. ಈಗ ಈ ಬಾವಿ ಸೇರಿದಂತೆ ಸುತ್ತಲಿನ ಊರಿನ ಬಾವಿಯಲ್ಲೂ ನೀರಿನ ಸಮೃದ್ಧತೆ. ಮುರಕ್ಕಲ್ಲಿನಲ್ಲಿ ಎದ್ದ ಹಸಿರುಗೋಡೆಯು ಮಳೆನೀರನ್ನು ಭೂ ಒಡಲಿಗೆ ಇಂಗಿಸುತ್ತಿದೆ. ಗುಡ್ಡದ ಮೇಲಿನ ಶಾಲೆಯ ಚಾವಣಿ ನೀರನ್ನು ನೈಸರ್ಗಿಕ ಹೊಂಡಗಳಿಗೆ ತಿರುಗಿಸಿದ್ದಾರೆ. ಬೆಳೆಯುತ್ತಿರುವ ಮರಗಳು ಮುರಕ್ಕಲ್ಲಿನ ಸೆರೆಗಳಲ್ಲಿ ಬೇರು ಇಳಿಸುತ್ತಿದೆ. ಇದೂ ನೀರಿಂಗಲು ಸಹಾಯಿ.
              ಇಂತಹ ಹಸಿರು ಸೇವೆಗೆ ಸಾರ್ವಜನಿಕರ ಸಹಕಾರ ಬೇಕು. ಕೇವಲ ಅಧ್ಯಾಪಕರು, ವಿದ್ಯಾರ್ಥಿಗಳು ಆರ್ಥಿಕ ಭಾರವನ್ನು ಹೊರುವುದು ತ್ರಾಸ. ಬೆಳೆದ ಕಾಡಿನ ರಕ್ಷಣೆಯಾಗಬೇಕು. ಭದ್ರವಾದ ಆರ್ಥಿಕ ಅಡಿಗಟ್ಟು ಬೇಕು. ಹಸಿರು ಪ್ರೀತಿಯ ಸನ್ಮನಸ್ಸಿನವರತ್ತ ಕಾಡು ಕಾದು ನೋಡುತ್ತಿದೆ.

(ಉದಯವಾಣಿ-ನೆಲದನಾಡಿ ಅಂಕಣ-5-11-2015)


Tuesday, October 27, 2015

ಹಸುರು ಮನದ ಹಸಿಯಾದ ಹಸಿರುಕಾಡು

               "ಹಸಿರೆಬ್ಬಿಸುವ ಅಭ್ಯಾಸ ಬದುಕಿನ ಭಾಗವಾಗಬೇಕು. ಕಾಡಿಲ್ಲದೆ ಬದುಕಿಲ್ಲ. ಕಾಡು ಕಾಡುತ್ತಾ ಇರಬೇಕು. ಜಲದ ಮುಖ್ಯ ಸಂಪನ್ಮೂಲವೇ ಮರಗಳು," ಪುತ್ತೂರಿಗೆ 'ಬಾಲವನ ಪ್ರಶಸ್ತಿ' ಸ್ವೀಕಾರಕ್ಕಾಗಿ ಆಗಮಿಸಿದ ಹಿರಿಯ ಪರಿಸರ-ವಿಜ್ಞಾನ ಪತ್ರಕರ್ತ ನಾಗೇಶ ಹೆಗಡೆ ಮಾತಿಗೆ ಸಿಕ್ಕರು. ಹಠಕಟ್ಟಿ ಹಸಿರನ್ನು ನಾಶಮಾಡುತ್ತಿರುವ ರಾಜಧಾನಿಯ ಒಂದು ಜೀವಂತ ಹಸಿರಿನ ಕತೆಗೆ ಕಿವಿಯಾದೆ.   
             ಬೆಂಗಳೂರಿನ ಟಿ.ಜಿ.ಹಳ್ಳಿ ಕೆರೆ ಮತ್ತು ಹೇಸರಘಟ್ಟ ಕೆರೆಗಳು ಬೆಂಗಳೂರಿಗೆ ನೀರೊದಗಿಸುವ ಜಲನಿಧಿಗಳಾಗಿದ್ದುವು. ಕೊಳವೆಬಾವಿಗಳ ಕೊರೆತ ಹೆಚ್ಚಾಯಿತು. ಕೆರೆಗಳು ಬಾಯಾರಿದುವು. ನೀರಿನ ಮಟ್ಟ ಕುಸಿದು ಹನಿ ನೀರಿಗೆ ಬಾಯ್ಬಿಟ್ಟವು. ಹೂಳು ತುಂಬಿತು. ಕೆರೆ ಎನ್ನುವ ಸಮೃದ್ಧ ಸಂಪನ್ನತೆಯ ತೇವ ಪೂರ್ತಿ ಆರಿತು. ಈಗ ಬೆಂಗಳೂರು ಶುದ್ಧ ನೀರಿಗಾಗಿ ಒದ್ದಾಡುತ್ತಿದೆ! ಎಲ್ಲೆಲ್ಲಿಂದಲೋ ನೀರು ಬರುತ್ತೆ ಬಿಡಿ.
            ಬೆಂಗಳೂರಿನ ಲಾಲ್ಭಾಗ್, ಕಬ್ಬನ್ ಪಾರ್ಕ್ - ಈ ಎರಡು ಹೆಸರು ಹೇಳುವಾಗಲೇ ಮಾತು ನಿಂತುಬಿಡುತ್ತದೆ. ಓಡಾಡಬಹುದಾದ, ಪರಿಸರವನ್ನು ಕಣ್ತುಂಬಿಕೊಳ್ಳಬಹುದಾದ ಬೇರೆ ಸ್ಥಳಗಳಿಲ್ಲ. ಹೆಸರಿಸುವಂತಹ ಜಾಗವಿಲ್ಲ. ಮಾರ್ಗದ ಇಕ್ಕೆಲಗಳು ಕಾಂಕ್ರಿಟ್ಮಯ. ವಿವಿಧ ಕನಸುಗಳನ್ನು ಹೊತ್ತು ಬೆಂಗಳೂರಿಗೆ ನುಗ್ಗುತ್ತಿರುವ ಹಸಿ ಮನಸ್ಸುಗಳ ಹಸಿರಿನ ಹುಡುಕಾಟ. ಏದುಸಿರಿನ ಉಸಿರಾಟ. ಅಗಣಿತ ಮ್ಹಾಲ್ಗಳು, ಫ್ಲೈಓವರ್ಗಳು. ಕಟ್ಟಡ ಕಾಮಗಾರಿಗಳು. ಮಣ್ಣೆಂಬುದು ಮರೀಚಿಕೆ.
            ರಾಜಧಾನಿಯಲ್ಲಿ ಗಿಡಗಳನ್ನು ನೆಡಬೇಕೆನ್ನುವ ಆಸಕ್ತರಿದ್ದಾರೆ. ಹಸಿರೆಬ್ಬಿಸುವ ತುಡಿತವಿದೆ. ಮನೆಯ ಸುತ್ತ ಗಿಡಗಳನ್ನು ನೆಟ್ಟು ಪೋಷಿಸುವ ಮನಸ್ಸಿದೆ. ನೆಡಲು ಜಾಗವೇ ಇಲ್ಲ. ಎಲ್ಲಿ ನೆಡಬೇಕು? ಈ ಯೋಚನೆ ಬಂದಾಗ ಟಿ.ಜಿ.ಹಳ್ಳಿ ಕೆರೆ ಸುತ್ತಲಿನ ಐನೂರ ಮೂವತ್ತೆಕ್ರೆ ಕಾಡನ್ನು ಮಾನವ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ವನವನ್ನಾಗಿ ಪರಿವರ್ತಿಸುವ ನಿರ್ಧಾರ. ಸಂಬಂಧಪಟ್ಟ ವರಿಷ್ಠರಿಗೆ, ಸರಕಾರಕ್ಕೆ ಮನವಿ. "ನಮ್ಮಲ್ಲಿ ದುಡ್ಡು ಕೇಳ್ಬೇಡಿ. ಹಣ ಮಾಡುವ ಉದ್ದೇಶ ಇದಲ್ಲ. ಹಸಿರು ಎಬ್ಬಿಸ್ತೀವಿ. ಮರಗಳ ಕಡಿತವಾಗದಂತೆ ನೋಡಿ ಕೊಳ್ತೀವಿ," ಮುಂತಾದ ಕಾರ್ಯಹೂರಣ ಮುಂದಿಟ್ಟರು. ಉದ್ದೇಶಶುದ್ಧಿಯನ್ನರಿತ ಅಧಿಕಾರಿಗಳಿಂದ ಹಸಿರು ನಿಶಾನೆ.
             ಈಗ ಆ ಕಾಡು ಬರೇ ಕಾಡಲ್ಲ. ಅದು 'ಸ್ಫೂರ್ತಿವನ'. ಎಂಟು ವರುಷದಿಂದ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ನಿರ್ವಹಣೆಗೆ ಹಸಿರು ಮನಸ್ಸಿನ ತಂಡವಿದೆ. ದನ, ಕುರಿ ಮೇಯಿಸುವುದು, ಕಾಡು ಕಡಿಯುವ-ಸವರುವ ಕತ್ತಿಗಳ ಹರಿತ ಕಡಿಮೆಯಾಗಿದೆ. ಗಿಡ ನೆಡುವ ಆಸಕ್ತರಿಗೆ ಮುಕ್ತ ಪ್ರವೇಶ. ಒಬ್ಬರು ಗಿಡ ನೆಡಲು ಮುಂದೆ ಬಂದರೆ ನೆಟ್ಟು, ಅರೈಕೆ ಮಾಡಿ ಬೆಳೆಸಿ, ಅದು ತಾನಾಗಿ ನೆಲಕ್ಕೊರಗುವ ವರೆಗೆ ತಂಡದ್ದೇ ಜವಾಬ್ದಾರಿ.
             ಬೆಂಗಳೂರಿನ ಮೂನ್ನೂರಿಪ್ಪತ್ತು ಶಾಲೆಗಳ ಹೆತ್ತವರು ಈ ಆಂದೋಳನಕ್ಕೆ ಸ್ಪಂದಿಸಿದ್ದಾರೆ. ಹುಟ್ಟುಹಬ್ಬ, ಮಕ್ಕಳಿಗೆ ರ್ರ್ಯಾಂಕ್  ಬಂದಾಗ, ಹಿರಿಯ ನೆನಪಿನಲ್ಲಿ, ವಿವಾಹ ವಾರ್ಶಿಕೋಕೋತ್ಸವ, ಸಮಾರಂಭ.. ಹೀಗೆ ಒಂದೊಂದು ನೆನಪಿನಲ್ಲಿ ಗಿಡಗಳನ್ನು ನೆಡಲು ಉತ್ಸುಕರಾಗಿದ್ದಾರೆ. ಹಸಿರೆಬ್ಬಿಸುವ ಮನಸ್ಸಿದೆ, ಜಾಗವಿಲ್ಲ ಎನ್ನುವ ಚಡಪಡಿಕೆಯ ಮಂದಿಗೆ ಖುಷಿಯಾಗಿದೆ.
              ಗಿಡಗಳನ್ನು ನೆಡುವಲ್ಲಿ 'ಸ್ಫೂರ್ತಿವನ'ವು ದಾನಿಗಳ ಶ್ರಮಹಗುರ ಮಾಡುವ ಉಪಾಯವೊಂದನ್ನು ಮುಂದಿಟ್ಟಿದೆ. ಒಂದು ಗಿಡಕ್ಕೆ ಒಂದೂವರೆ ಸಾವಿರದಂತೆ ಪಾವತಿ ಮಾಡಿದರೆ ಅವರ ಹೆಸರಿನಲ್ಲಿ ಗಿಡ ನೆಟ್ಟು ಆರೈಕೆ ಮಾಡುವ ಜವಾಬ್ದಾರಿ. ಬೆಂಗಳೂರು ಸುತ್ತುಮುತ್ತ ಇಲ್ಲಿನ ಪರಿಸರಕ್ಕೆ ಹೊಂದುವ ಮೂವತ್ತರಿಂದ ನಲವತ್ತು ಜಾತಿಯ ಕಾಡು ಗಿಡಗಳಿವೆ. ಇದರಲ್ಲಿ ಯಾವ ಗಿಡವನ್ನು ಅಪೇಕ್ಷಿಸುತ್ತಾರೋ ಅದನ್ನು ನೆಟ್ಟು ಪಾಲಿಸಲಾಗುತ್ತದೆ. ಈ ವ್ಯವಸ್ಥೆ ಸಾಕಷ್ಟು ಪಾಲಕರಿಗೆ ಸ್ವೀಕೃತಿಯಾಗಿದೆ.
              ಸಮಯ ಹೊಂದಿಸಿಕೊಂಡು ವಿವಾಹ ಮಂಟಪಗಳಿಗೆ ಹೋಗಿ ಮುಖ್ಯಸ್ಥರೊಡನೆ ಮಾತುಕತೆ ಮಾಡ್ತೀವಿ. ಉದ್ದೇಶ ಸ್ಪಷ್ಟಪಡಿಸುತ್ತೇವೆ. ಮದುವೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡುವಾಗ ಸಾವಿರದೈನೂರು ರೂಪಾಯಿ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ. ಬಡಾವಣೆಗಳಲ್ಲಿರುವ ವಿದ್ಯಾರ್ಥಿಗಳ ಪಾಲಕರೇ ಹಸಿರೆಬ್ಬಿಸುವ ಈ ಕಾಯಕದ ಪ್ರಚಾರಕರು. ಒಬ್ಬರ ನಿರ್ಧಾಾರ ಇನ್ನೊಬ್ಬರಿಗೆ ಸ್ಫೂರ್ತಿ.  ಹಾಗಾಗಿ ಮುನ್ನೂರಿಪ್ಪತ್ತು ಶೈಕ್ಷಣಿಕ ಸಂಸ್ಥೆಗಳಿಗೆ ವಿಚಾರ ತಲುಪಿದೆ.  ಸ್ಪಂದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಾವಾಗಿ ಬರುತ್ತಾ ಇದ್ದಾರೆ. ತಂಡದಲ್ಲಿ ಬೆರಳೆಣಿಕೆಯ ಸದಸ್ಯರಿದ್ದು ವಿವಿಧ ಜವಾಬ್ದಾರಿಗಳಲ್ಲಿರುವವರು. ವೇಗವಾಗಿ ಕೆಲಸ ಆಗುತ್ತಿಲ್ಲ ಎನ್ನುವ ವಿಷಾದವೂ ಇದೆ.
                ಯಾರ್ಯಾರ ಗಿಡೆ ಎಲ್ಲೆಲ್ಲಿ ಎನ್ನುವ ದಾಖಲೆಯಿದೆ. ಗಿಡಗಳಲ್ಲಿ ಲೇಬಲ್ ಅಂಟಿಸಿಲ್ಲ. ಗಿಡದ ದಾತಾರರ ವಿಳಾಸದಿಂದ ಹಿಡಿದು ಗಿಡದ ಪೂರ್ತಿ ಜಾತಕ, ನೆಟ್ಟ ಜಾಗವನ್ನು ಜಿಪಿಎಸ್ ಮೂಲಕ ನೋಡುವ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೂರನೇ ವರುಷದ ನೆನಪಿಗೆ ನೂರು ಗಿಡಗಳನ್ನ ಪ್ರಾಯೋಜಿಸಿದ್ದಾರೆ. ಸಾಪ್ಟ್ವೇರ್ ಕಂಪೆನಿಗಳ ಬೆಂಬಲವಿದೆ. ವಿವಿಧ ಕಂಪೆನಿಗಳಲ್ಲಿರುವ ಉದ್ಯೋಗಸ್ಥರು ನೆನಪಿಗಾಗಿ ಸ್ಫೂರ್ತಿವನದತ್ತ ಮುಖ ಮಾಡುತ್ತಿದ್ದಾರೆ.
               ಪ್ರಾಮಾಣಿಕ ಸಹಾಯಕರ ಅಲಭ್ಯತೆ - ಈ ಕಾಯಕದಲ್ಲಿ ಎದುರಾಗುವ ತೊಡಕು. ಸ್ಥಳೀಯರು ಸಿಕ್ತಾ ಇಲ್ಲ. ಸಿಕ್ಕರೂ ಮುಂಗಡ ತೆಕ್ಕೊಂಡು ನಾಪತ್ತೆ! ಸಮಸ್ಯೆಗಳ ಮಧ್ಯೆ ಗಿಡಗಳ ಆರೈಕೆ ನಡೆಯುತ್ತಿದೆ. ಗರಿಷ್ಠ ಭದ್ರತೆ ನೀಡುತ್ತಿದ್ದೇವೆ. ಬೆಂಕಿಯ ಭಯದಿಂದ ಕಾಡನ್ನು ರಕ್ಷಿಸುವುದು ತಲೆನೋವು. ಪ್ರತೀ ಊರಲ್ಲೂ ಇಂತಹ ವನಗಳನ್ನು ರೂಪಿಸುವಂತಹ ಅಗತ್ಯವಿದೆ. ಕಾಡಿರುವ ಮಲೆನಾಡು, ಕರಾವಳಿಗಳಲ್ಲೂ ಗಿಡ ನೆಡುವ ಪರಿಪಾಠ ಶುರುವಾಗಬೇಕು.
              ನಾಗೇಶ ಹೆಗಡೆಯವರು ಮಾತು ನಿಲ್ಲಿಸಿದರು. 'ಹೇಗಿದೆ ಕಾಡಿನ ಕತೆ' ಪ್ರಶ್ನಿಸಿದರು. "ಬೆಂಗಳೂರಿಗರು ವೀಕೆಂಡ್ ಬಂದ್ರೆ ಸಾಕು, ನಗರದಿಂದ ಹೊರಗೆ ಹೋಗೋಕೆ ಕಾದಿರ್ತಾರೆ. ಬಹಳಷ್ಟು ಮಂದಿ ಹೊರವಲಯದಲ್ಲಿ ಜಾಗ ಖರೀದಿಸಿ ವೀಕೆಂಡ್ ಅಗ್ರಿಕಲ್ಚರ್ ಶುರು ಮಾಡಿದ್ದಾರೆ. ಕಾಂಕ್ರಿಟ್ ಕಾಡೊಳಗೆ ಹಸಿರಿಗಾಗಿ ತುಡಿಯುವ ಮನಸ್ಸುಗಳಿವೆ. ಉದ್ಯೋಗದ ಒತ್ತಡವು ಹಸಿರ ಪ್ರೀತಿಗೆ ಬ್ರೇಕ್ ಹಾಕುತ್ತಿದೆ. ನಗರ ಮೋಹದಿಂದ ಬಂದವರು ನಾಲ್ಕೈದು ವರುಷದಲ್ಲೇ ಹಳ್ಳಿಯನ್ನು ನೆನಪು ಮಾಡಿಕೊಳ್ಳುವ ಸ್ಥಿತಿಯಿದೆ," ಬೆಂಗಳೂರಿನ ಪ್ರಕೃತ ಸ್ಥಿತಿಯನ್ನು ನಾಗೇಶ್ ಕಟ್ಟಿಕೊಡುತ್ತಾ ಫಕ್ಕನೆ ಕೋಲಾರವನ್ನು ನೆನಪಿಸಿಕೊಂಡರು, "ನೋಡಿ, ಕೋಲಾರದಲ್ಲಿ ಕ್ಯಾರೆಟ್ ಬೆಳೆಯುತ್ತಾರೆ. ಕ್ಯಾರೆಟನ್ನು ತೊಳೆದು ಸ್ವಚ್ಛಗೊಳಿಸಲು ಎಷ್ಟೊಂದು ನೀರು ಪೋಲು ಆಗುತ್ತದೆ ಗೊತ್ತಾ. ಟ್ಯಾಂಕರ್, ಡೀಸಿಲ್ ಪಂಪ್ಗಳು ಕೆರೆಯಿಂದ ಅವಿರತ ಪಂಪ್ ಮಾಡುತ್ತಲೇ ಇವೆ. ಅಲ್ಲಿನ ನೀರಿನ ಸಮಸ್ಯೆಗೆ ಇದೂ ಒಂದು ಅಜ್ಞಾತ ಕಾರಣ. "
                  ಕನ್ನಾಡಿನಲ್ಲಿ ತೊಂಭತ್ತೆಂಟು ತಾಲೂಕುಗಳಲ್ಲಿ ಸರಕಾರವು ಬರ ಘೋಷಿಸಿದೆ. ಬರ ಪ್ರದೇಶವನ್ನು ಸಮಿತಿಯೊಂದು ಗೊತ್ತುಮಾಡುತ್ತದೆ. ಮುನ್ನೂರ ಇಪ್ಪತ್ತು ಕೋಟಿ ಅನುದಾನಕ್ಕೂ ಸಹಿ ಬಿದ್ದಿದೆ. ಇದು ಹೇಗೆ ಖರ್ಚಾಗುತ್ತೆ ಎನ್ನುವ ಅಂಕಿಅಂಶ ಎಲ್ಲೂ ಸಿಗೋದಿಲ್ಲ. ಒಂದೆಡೆ ಹಣ ಖರ್ಚಾಗುತ್ತೆ. ಇನ್ನೊಂದೆಡೆ ಬರದ ಊರಿನ ಬೆಳಗು-ಸಂಜೆಗಳ ಜತೆ ಕೋಟಿಗಳು ನಗುತ್ತಾ ಕರಗುತ್ತವೆ. ಬೇಸಿಗೆಯ ನೀರಿನ ಬರಕ್ಕೆ ಪರಿಹಾರ ನಂನಮ್ಮಲ್ಲೇ ಇದೆ.  
                  ಸೋಲಾರ್ ವಿದ್ಯುತ್ತಿನ ಮೂಲಕ ಸಮುದ್ರದ ನೀರು ಬಳಕೆ ಮಾಡಲು ಸಾಧ್ಯವಾ? ಸಾಧ್ಯ ಎನ್ನುವುದಕ್ಕೆ ಸಿಂಗಾಪುರದ ಉದಾಹರಣೆ ಮುಂದಿದೆ. ಸಿಂಗಾಪುರದಲ್ಲಿ ನೀರು ಎನ್ನುವುದು ಅಮೃತ. ಪೋಲು ಬಿಡಿ, ಹನಿ ನೀರಿಗೂ ಕೋಟಿ ರೂಪಾಯಿ ಮೌಲ್ಯ. ಸಿಂಗಾಪುರಕ್ಕೆ ಚಿಕ್ಕ ಪ್ರಮಾಣದಲ್ಲಿ ನೀರು ಮಲೇಶ್ಯಾ ಒದಗಿಸುತ್ತದೆ. ಮಳೆ ನೀರಿನ ಕೊಯ್ಲು ವ್ಯಾಪಕವಾಗಿದೆ. ಬಳಸು ನೀರನ್ನು ಶುದ್ಧಗೊಳಿಸಿ ಮರುಬಳಕೆ ಮಾಡುವ ತಂತ್ರಜ್ಞಾನವಿದೆ. ನಗರದ ತ್ಯಾಜ್ಯ ನೀರೆಲ್ಲವನ್ನೂ ಸಂಗ್ರಹಿಸಿ, ಶುದ್ಧೀಕರಿಸಿ, ಪುನಃ ಬಳಕೆ ಮಾಡುವ ವಿಧಾನ. ಸಮುದ್ರದ ನೀರನ್ನು ಶುದ್ಧ ಮಾಡಿ ಕುಡಿಯಲು ಉಪಯೋಗಿಸುವ ವ್ಯವಸ್ಥಿತ ಯೋಜನೆಯಿಂದಾಗಿ ಸಿಂಗಾಪುರ ನೀರಿನ ಬಳಕೆಯಲ್ಲಿ ಪ್ರಪಂಚದಲ್ಲೇ ಐಕಾನ್ ಆಗಿದೆ. ನಮ್ಮಲ್ಲಿ ಅಷ್ಟಾಗದಿದ್ದರೂ ಒಂದಷ್ಟು ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲವಾ? ರಾಜಕೀಯ ಶಕ್ತಿ ಮಾತ್ರ ಸಾಲದು. ಇಚ್ಚಾಶಕ್ತಿಯೂ ಬೇಕು. ಮನಸ್ಸಿನಿಂದ ಹುಟ್ಟಿದ ಕಾಳಜಿಯೂ ಬೇಕು.
                ಪುತ್ತೂರಿನಲ್ಲಿ 'ಬಾಲವನ ಪ್ರಶಸ್ತಿ' ಸ್ವೀಕರಿಸಿದ ಬಳಿಕ ನಾಗೇಶ ಹೆಗಡೆಯವರು ಶಾಲಾ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದಿರು. ವಿಜ್ಞಾನ, ಪರಿಸರ, ಸಮಸಾಮಯಿಕ ವಿಚಾರಗಳ ಪ್ರಶ್ನೆಗಳಿಗೆ ಮಗುವಾಗಿ ಉತ್ತರಿಸಿದರು. ವಿಜ್ಞಾನವನ್ನು ಸರಳ ಕನ್ನಡದಲ್ಲಿ ಅರ್ಥವಾಗುವ ಹಾಗೆ ಮಾತನಾಡುವ, ಬರೆಯುವ ನಾಗೇಶ್ ಮಕ್ಕಳನ್ನು ಆವರಿಸಿಕೊಂಡರು.

 (ಉದಯವಾಣಿ/ನೆಲದನಾಡಿ ಅಂಕಣ/24-10-2015)


Sunday, October 4, 2015

ನೀರನ್ನು ಸೃಷ್ಟಿಸಲು ಸಾಧ್ಯವೇ?



            ರಾಜಧಾನಿಗೆ ಪ್ರಯಾಣಿಸುತ್ತಿದ್ದಾಗ ಗೌರಿಬಿದನೂರಿನ ರೈತರೊಬ್ಬರ ಪರಿಚಯವಾಯಿತು. ನೀರಿನ ಸಂಕಟಗಳದ್ದೇ ಮಾತುಕತೆ. ರಾಜಕಾರಣದ ಆಟಗಳ ಆಟೋಪ. ಕರ್ನಾಟಕವನ್ನು ಉತ್ತರ, ದಕ್ಷಿಣ ಎಂದು ವಿಭಾಗಿಸುವ, ಭಾವನೆಗಳಿಗೆ ಘಾಸಿ ಮಾಡುವ, ಸಂಘರ್ಷಗಳನ್ನು ಒಂದು ವ್ಯವಸ್ಥೆಯೊಳಗೆ ಜೀವಂತವಾಗಿಡುವ ಕಾಣದ ಕೈಗಳ ಕರಾಮತ್ತುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅವರಲ್ಲಿ ನೀರಿಗಾಗಿ ಮನಸ್ಸುಗಳನ್ನು ಒಡೆಯುವ ರಾಜಕೀಯ ವ್ಯವಸ್ಥೆಗಳತ್ತ ಆಕ್ರೋಶವಿತ್ತು.
            "ಅತ್ತ ಕಳಸಾ-ಬಂಡೂರಿ, ಇತ್ತ ನೇತ್ರಾವತಿ, ಮೊತ್ತೊಂದೆಡೆ ಕಾವೇರಿ, ಇನ್ನೊಂದೆಡೆ ಮಹದಾಯಿ.. ಹೀಗೆ ಸಮಸ್ಯೆಗಳನ್ನು ವಿವಾದದ ಸುಳಿಯಲ್ಲಿ ಸಿಲುಕಿಸುವುದೇ ರಾಜಕೀಯ ಶಕ್ತಿಗಳ ಗುರಿ ಎನ್ನುವಂತಾಗಿದೆ. ಇವರಿಗೆಲ್ಲಾ ಪರಿಹಾರಕ್ಕೆ ದಾರಿಗಳು ಗೊತ್ತಿವೆ. ಓಟು ಬ್ಯಾಂಕುಗಳು ಈ ದಾರಿಗಳನ್ನು ವಿಮುಖಗೊಳಿಸುತ್ತಿವೆ. ಸಾರ್ವಜನಿಕ ಆಸ್ತಿಗಳು, ಜನರ ಸಂಕಷ್ಟಗಳು ಅವರಿಗೆ ಬೇಕಾಗಿಲ್ಲ. ಜನರನ್ನು ಕೆರಳಿಸುವ ಹೇಳಿಕೆಗಳಿಂದ ಆಗುವ ವಿಘ್ನಗಳಿಂದ ಖುಷಿ ಪಡುವ ಜನನಾಯಕರು ಇರುವಲ್ಲಿಯ ತನಕ ಸಮಸ್ಯೆಗಳು ಶಾಶ್ವತವಾಗಿರುತ್ತವೆ." ಎಂದರು.
             "ಕೆರೆಗಳಿಂದಾಗಿ ಜೀವಜಲವು ಉಸಿರಾಡುತ್ತಿವೆ. ಕರ್ನಾಟಕದಲ್ಲಿ ಎಷ್ಟೊಂದು ಕೆರೆಗಳಿದ್ದುವು. ಇದಕ್ಕಾಗಿ ಭೂಮಿಯನ್ನು ಉಂಬಳಿ ಬಿಡುವ ಸನ್ಮಸ್ಸಿನವರಿದ್ದರು. ಧಾರ್ಮಿಕ, ಸಾಮಾಜಿಕ ಭಾವನೆಗಳು ಆ ಊರಿನ ನೀರಿನ ಆವಶ್ಯಕತೆಗಳನ್ನು ನೀಗಿಸುತ್ತಿದ್ದುವು. ಹಿಂದಿನ ಕಾಲದಿಂದಲೂ ನೀರಿಗೆ ಮೊದಲಾದ್ಯತೆ. ಆ ಬಳಿಕವೇ ಕೃಷಿ, ಅಭಿವೃದ್ಧಿಯತ್ತ ಯೋಚನೆ. ಇಂತಹ ಸಂಸ್ಕೃತಿಯಿರುವ ಕರ್ನಾಟಕವನ್ನು ರಾಜಕೀಯ ವಾತಾವರಣ ಹಾಳುಮಾಡಿತು. ಮೊದಲಾದ್ಯತೆಯಲ್ಲಿರಬೇಕಾದ ನೀರಿನ ಲಭ್ಯತೆಯು ಕೊನೆಯ ಆಯ್ಕೆಯಾಗಿ ಬದಲಾಯಿತು." ಅವರು ಮಾತನಾಡುತ್ತಿದ್ದಾಗ ಇಡೀ ಕನ್ನಾಡಿನ ನೀರಿನ ಕಣ್ಣೀರಿಗೆ ದನಿಯಾದಂತೆ ಕಂಡಿತು.
           ಸರಕಾರಕ್ಕೆ ಗ್ರಾಮ ಭಾರತದ ಹಿತ ಬೇಕಾಗಿಲ್ಲ. ಕೋಟಿಗಳ ಮುಂದೆ ಎಷ್ಟು ಸೊನ್ನೆಯನ್ನಿಡಬೇಕೆಂಬ ಲೆಕ್ಕಚಾರ. ಎಷ್ಟು ಸೊನ್ನೆಗಳನ್ನಿಡಬೇಕೆಂದು ನಿರ್ಧರಿಸುವ ಅಧಿಕಾರಿಗಳಿದ್ದಾರೆ. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗಳಾದಾಗ ಅಷ್ಟಿಷ್ಟು ನೀಡಿ ಕೈತೊಳೆದುಕೊಂಡರು. ಕೇಂದ್ರದಿಂದಲೂ ಅಧ್ಯಯನ ತಂಡ ಬಂತು. ಅವೆಲ್ಲಾ ಕಾಗದದಲ್ಲಿ ಉಳಿದು ಬಿಡುತ್ತವಷ್ಟೆ. ನಮ್ಮ ಬದುಕಿಗೆ ಬೇಕಾದ ವ್ಯವಸ್ಥೆಯನ್ನು ನಾವೇ ಪೂರೈಸಿಕೊಳ್ಳಬೇಕು. ನೀರಿನ ವಿಚಾರಕ್ಕೆ ಬಂದರೆ ಅಳಿದುಳಿದ ಕೆರೆಗಳಲ್ಲಿ ನೀರು ಬತ್ತಿವೆ. ಅಂತರ್ಜಲ ಆಳಕ್ಕಿಳಿದಿದೆ. ಕೊಳವೆಬಾವಿಗಳನ್ನು ಕೊರೆಯಲು ಪೈಪೋಟಿ. ನದಿಗಳಲ್ಲಿ ನೀರಿಲ್ಲ. ಇಷ್ಟೆಲ್ಲ ತೊಂದರೆಗಳಿಗೆ ಯಾರು ಕಾರಣ?
         ರೈತರ ಕುರಿತು ಹಗುರವಾಗಿ ಮಾತನಾಡುವ ನಮ್ಮ ನಡುವಿನ ಸಾಕ್ಷರರ ಚಿತ್ರ ಹಾದುಹೋದುವು. ಯಾವುದೇ ಪದವಿಯನ್ನು ಓದದ ಅವರು ಕೃಷಿ, ನೀರಿನ ಜ್ಞಾನದಲ್ಲಿ ಅಪ್ಡೇಟ್ ಆಗಿದ್ದರು. ರಾಜಧಾನಿಯಲ್ಲಿ ಬಸ್ಸಿಳಿದು (ಮೆಜೆಸ್ಟಿಕ್) ಒಂದರ್ಧ ಗಂಟೆ ಮಾತನಾಡುವಾಗ ಹೇಳಿದ ಒಂದೆರಡು ವಾಕ್ಯ ಮರೆಯಲಾರೆ - ರೈತನ ಬೆನ್ನು ತಟ್ಟುವವರು ಯಾರೂ ಇಲ್ಲ. ಅನ್ನದಾತ ಎಂದು ಅಟ್ಟಕ್ಕೇರಿಸುವ ಕೆಟ್ಟ ಚಾಳಿ.  ನಿಜಕ್ಕೂ ರೈತ ಸಮೂಹಕ್ಕೆ ಅವಮಾನ ಮಾಡಿದಂತೆ. ನೋಡಿ, ನಾವು ನಿಂತ ಜಾಗ ಇದೆಯಲ್ಲಾ, ಮೊದಲು ಇದೊಂದು ದೊಡ್ಡ ಕೆರೆಯಾಗಿತ್ತು. ಈಗ ಹೇಗಿದೆ? ಇದೊಂದು ಉದಾಹರಣೆ ಮಾತ್ರ. ರಾಜ್ಯದ ಎಲ್ಲಾ ಕೆರೆಗಳ ಸ್ಥಿತಿಯೂ ಇದೇ. ಕೆರೆಗಳ ಪುನರ್ಜ್ಜೀವನ ಮತ್ತು ನೀರಿಂಗಿಸುವ ಕೆಲಸ ನಡೆಯಬೇಕಾಗಿದೆ. ಜತೆಗೆ ಅರಣ್ಯೀಕರಣವೂ ಕೂಡಾ.
         ಕೆರೆಗಳು - ನೀರೊದಗಿಸುವ ಜಲನಿಧಿಗಳು. ಒಂದು ಕೆರೆ ತುಂಬಿದಾಗ ಸುತ್ತಲಿನ ಬಾವಿ, ಚಿಕ್ಕ ಕೆರೆಗಳು, ಅಂತರ್ಜಲ, ಒರತೆ ತುಂಬಿ ನೀರಿನ ಸಮೃದ್ಧತೆ. ಆ ನೀರಿನ ಸುತ್ತ ಸಾಂಸ್ಕೃತಿಕವಾದ ಭಾವನೆಗಳು. ದೈವಿಕ ದೃಷ್ಟಿಕೋನ. ಒಂದಷ್ಟು ಆಚಾರಗಳು, ವಿಚಾರಗಳು. ಇಂತಹ ಕಟ್ಟುಪಾಡುಗಳನ್ನು ಹಿರಿಯರು ನೀರುಳಿಸುವ ಲಕ್ಷ್ಯದಲ್ಲಿಟ್ಟೇ ರೂಪಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಅಂತಹ ವ್ಯವಸ್ಥೆಯನ್ನು ಪ್ರಶ್ನಿಸಿದೆವು. ವಿಮರ್ಶಿಸಿದೆವು. ಮೂಢನಂಬಿಕೆ ಎಂದೆವು. ಶೋಷಣೆ ಎನ್ನುವ ಹಣೆಪಟ್ಟಿ ಹಾಕಿದೆವು. ಪರಿಣಾಮ ಕಣ್ಣ ಮುಂದಿದೆ.
         ನಮ್ಮ ಹಿರಿಯರನ್ನು ಮಾತನಾಡಿಸೋಣ. ಅವರಿಗೆ ಭೂಮಿಯು ತಾಯಿ ಸದೃಶ. ನದಿಗಳೆಲ್ಲಾ ಅಕ್ಕ ತಂಗಿಯರು. ಅವರನ್ನು ಆರಾಧಿಸಿದರು. ತಂತಮ್ಮ ಮಿತಿಯ ಜ್ಞಾನದಿಂದ ನೀರಿನ ಹರಿವನ್ನು ತಡೆದು ಭೂಮಿಗೆ ಇಂಗಿಸುವ ಯತ್ನ ಮಾಡಿದರು. ಕೆರೆ, ಮದಕ, ಪಳ್ಳ, ಹಳ್ಳ, ಬಾವಿಗಳಲ್ಲಿರುವ ನೀರಿನ ಲಭ್ಯತೆಯಂತೆ ಕೃಷಿ ಮಾಡಿದರು. ಅರಣ್ಯವನ್ನು ಬೆಳೆಸಿದರು. ಮಳೆಗಾಲದಲ್ಲಿ ಒಸರಾಗಿ ಹರಿಯುವ ನೀರನ್ನು ಬಳಸಿಕೊಂಡರು. ಎಲ್ಲೆಲ್ಲಾ ಸಂಗ್ರಹಿಸಿಕೊಳ್ಳಲು ಸಾಧ್ಯವಿದೆಯೋ ಅಲ್ಲೆಲ್ಲಾ ನೀರನ್ನು ಸಂಗ್ರಹಿಸಿ ಬಳಸಿದರು, ಭೂ ಒಡಲಿಗೆ ಉಣಿಸಿದರು.
         ಕೃಷಿಕ ಡಾ.ಡಿ.ಸಿ.ಚೌಟರು 'ಮದಕ' ಎನ್ನುವ ಪುಸ್ತಕದಲ್ಲಿ ಮಾರ್ಮಿಕವಾಗಿ ಹೇಳುತ್ತಾರೆ, "ನಮ್ಮ ಜಲಮೂಲಗಳು ಬತ್ತುತ್ತಿವೆ. ಕಾಡು ಕಡಿದು ಮೂಲನಿವಾಸಿಗಳನ್ನು ಓಡಿಸಿ ಸಹಸ್ರಾರು ಕೋಟಿ ರೂಪಾಯಿಯ ಸಂಪತ್ತನ್ನು ವ್ಯಯಿಸಿ ಅಣೆಕಟ್ಟೆಗಳನ್ನು ಕಟ್ಟಿ ನೀರು ಹಂಚುವ ಕಾರ್ಯಕ್ಕೆ ತೊಡಗಿದ್ದೇವೆ. ಭೂಮಿಯ ಗರ್ಭದಿಂದ ಸಾವಿರ ಅಡಿಯ ಕೊಳವೆಬಾವಿಗಳನ್ನು ಹಾಕಿ ನೀರು ಹೀರಹತ್ತಿದೆವು. ಈಗ ಸಮುದ್ರದ ನೀರಿನ ಉಪ್ಪನ್ನು ಶುದ್ಧಗೊಳಿಸಿಸುವ ಸಾಹಸಕ್ಕೆ ಹೊರಟಿದ್ದೇವೆ. ಈ ಎಲ್ಲಾ ಸಾಹಸಗಳು ಪಟ್ಟಣದ ಅವಶ್ಯಕತೆಗಳನ್ನು ಪೂರೈಸಲು. ಕೃಷಿಗಾಗಿ ಅಲ್ಲ. ಇವು ಸೃಷ್ಟಿಯ ನಿಯಮಗಳನ್ನು ಬದಲಿಸಿ ನಿಸರ್ಗದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸುವ ಮನುಷ್ಯನ ಹುನ್ನಾರ."
         "ಮಳೆನೀರು ಕೆರೆ, ಬಾವಿ, ನದಿಗಳೆಲ್ಲ ಸೇರಿ ಹರಿದು ಸಮುದ್ರ ಸೇರುತ್ತದೆ. ಸಮುದ್ರದ ನೀರು ಆವಿಯಾಗಿ ಆಕಾಶ ಸೇರುತ್ತದೆ. ಆವಿ ಮೋಡವಾಗಿ, ಮೋಡ ಮಳೆಯಾಗಿ ಭೂಮಿ ಸೇರುತ್ತದೆ. ಬಾಯಾರಿದ ಭೂಮಿ ತೃಪ್ತಿಯಿಂದ ನೀರು ಕುಡಿದು ಒಸರಾಗಿ ಹೊರ ಬಿಡುತ್ತದೆ. ಆ ಒಸರು ಮತ್ತೆ ಸಮುದ್ರ ಸೇರುವ ತವಕದಲ್ಲಿರುತ್ತದೆ. ಈ ಸಹಜ ಕ್ರಿಯೆಯನ್ನೇ ಬದಲಿಸ ಹೊರಟ ಮನುಷ್ಯನ ಅಹಂಕಾರಕ್ಕೆ ನೀರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಇಪ್ಪತ್ತನೇ ಶತಮಾನವು ಅಣೆಕಟ್ಟೆಗಳನ್ನು, ಕಾಲುವೆಗಳನ್ನು, ಕೊಳವೆಬಾವಿಗಳನ್ನು ತಂದು ಪ್ರಕೃತಿ ಸಹಜ ಸಂಪತ್ತಿನೊಂದಿಗೆ ಆಟವಾಡಿತು. ನಮ್ಮ ಸಹಜ ಪ್ರಕೃತಿಯ ನೀರಿನ ಮೇಲೆ ಹಲವು ಅತ್ಯಾಚಾರಗಳನ್ನು ಇಂಜಿನಿಯರುಗಳು ಮಾಡಿದರು. ಅರಣ್ಯಗಳನ್ನು ನಾಶ ಮಾಡಿದರು. ನದಿಗಳು ಬತ್ತಿದುವು. ನೀರಿನ ಬದಲಿಗೆ ವಿದ್ಯುಚ್ಛಕ್ತಿ ಕೊಟ್ಟರು. ಸದಾ ಹರಿಯುತ್ತಿದ್ದ ನದಿಗಳು ಬೇಸಿಗೆಯಲ್ಲಿ ಬತ್ತಿ ಮಳೆಗಾಲದಲ್ಲಿ ಮಾತ್ರ ಹರಿಯುವಂತೆ ಮಾಡಿದರು.."
         ಪ್ರಕೃತ ಕನ್ನಾಡು ಅನುಭವಿಸುವ ಸಂಕಟಗಳ ಹಿಂದೆ ಅಭಿವೃದ್ಧಿ ಮತ್ತು ಅನಿವಾರ್ಯ ಎಂಬೆರಡು ಶಬ್ದಗಳು ಹೊಸೆದುವು. ಹಾಗಾಗಿ ಕೆರೆಗಳ ನಾಡಲ್ಲಿ ಕೆರೆಗಳನ್ನು ಹುಡುಕುವ ದುಃಸ್ಥಿತಿ. ಹೂಳು ತುಂಬಿ ಕೆರೆಗಳೇ ನಾಪತ್ತೆಯಾಗಿವೆ. ಎಷ್ಟೋ ಕೆರೆಗಳು ಅಭಿವೃದ್ಧಿಯಾಗಿರುವುದು ಕಡತದಲ್ಲಿ ಮಾತ್ರ. ಕೋಟಿ ಕೋಟಿಗಳ ಲೆಕ್ಕಣಿಕೆಯಲ್ಲಿರುವ ನಮ್ಮ ಆಡಳಿತ ವ್ಯವಸ್ಥೆಯು ದೂರಗಾಮಿ ಯೋಜನೆಗಳನ್ನು ಹಾಕಿಕೊಳ್ಳದಿರುವುದರಿಂದ ಸಂಕಟಗಳ ಸರಮಾಲೆಗಳು ಅನುಭವಕ್ಕೆ ಬರುತ್ತವೆ. ರಿಸಾರ್ಟ್, ಓಟು ಬ್ಯಾಂಕ್, ಕೆಸರೆರೆಚಾಟ, ಹಗುರ ಮಾತುಗಳೇ ರಾಜಕಾರಣದ ಅರ್ಹತೆಯಾಗಿರುವ ಪ್ರಕೃತ ದಿನಮಾನದಲ್ಲಿ ಗಟ್ಟಿಯಾಗಿ ನೀರಿನ ದನಿ ಎಬ್ಬಿಸುವ ಕಂಠವು ತ್ರಾಣ ಕಳೆದುಕೊಂಡಿದೆ.
         ಆರಂಭದಲ್ಲಿ ಮಾತಿಗೆ ಸಿಕ್ಕ ರೈತರ ಮಾತನ್ನು ಉಲ್ಲೇಖಿಸುತ್ತೇನೆ, ನಂನಮ್ಮ ನೀರಿನ ಸಮಸ್ಯೆಗೆ ನಮ್ಮಲ್ಲೇ ಪರಿಹಾರವಿದೆ. ನಮ್ಮೂರಲ್ಲಿ ಬಹಳ ಮಿತವಾಗಿ ಮಳೆ ಬರುತ್ತದೆ. ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸರಕಾರ ಸ್ಪಂದಿಸಬೇಕು. ಚಿಕ್ಕಪುಟ್ಟ ಕೆರೆಗಳ ದುರಸ್ತಿಗಳನ್ನು ಆಯಾಯ ವ್ಯಾಪ್ತಿಯ ರೈತರೇ ಪಕ್ಷ, ಜಾತಿಗಳನ್ನು ಮರೆತು ಮಾಡಬೇಕು. ಬಿಗುಮಾನ ತೊರೆದು ಅಧಿಕಾರಿಗಳು ರೈತರನ್ನು ಒಲಿಸಿಕೊಂಡರೆ ಈ ಕೆಲಸ ದೊಡ್ಡದೇನಲ್ಲ. ನೀರಿನ ಮೂಲಗಳ ಸಂರಕ್ಷಣೆಯಾಗಬೇಕು.
         ನೀರಿನ ಹೋರಾಟದ ಕಾವು ಕನ್ನಾಡು ಹಬ್ಬುತ್ತಿದೆ. ಮಳೆಯೂ ಕೈಕೊಡುತ್ತಿದೆ. ಮತಿಯೂ ತಪ್ಪುತ್ತಿದೆ. ಗೌರವಾನ್ವಿತ ಹುದ್ದೆಯಲ್ಲಿರುವವರು ಗೌರವ ಬದಿಗಿರಿಸಿ ಹಗುರವಾಗಿ ಸುದ್ದಿಗಳನ್ನು ಹರಿಯಬಿಡುತ್ತಾರೆ. ರಾಜಕೀಯ ರಕ್ಷಣೆಗಾಗಿ ಸಾಮಾಜಿಕ ಜವಾಬ್ದಾರಿ ಮತ್ತು ವ್ಯವಸ್ಥೆಯನ್ನು ಬಲಿಕೊಡಲು ಹೇಸದ, ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಜನಪರವಾಗಿ ನಿಲ್ಲದಿದ್ದರೆ - ನಮ್ಮ ಇಂಧನ ಸಚಿವರು ಹೇಳಿದಂತೆ 'ದೇವರೇ ಗತಿ'!
        'ಜಲ ಭಾಗ್ಯ' - ಮಾನ್ಯ ಮುಖ್ಯಮಂತ್ರಿಗಳೇ, ಹೊಸ ಭಾಗ್ಯ ಯೋಜನೆಯನ್ನು ಘೋಷಿಸುವಿರಾ? ಇದು ಕನ್ನಾಡಿನ ಜನರ ಆದ್ಯತೆಯ ಕೂಗು. ಹಲವು ಭಾಗ್ಯಗಳನ್ನು ರೂಪಿಸಿದ ತಮಗಿದು ಕಷ್ಟವಾಗಲಾರದು. ಈ ಯೋಜನೆ ನಿಜಾರ್ಥದಲ್ಲಿ ಜನಹಿತವಾಗಿರಲಿ. ಜೀವ ಹಿತವಾಗಿರಲಿ.   
 

ಜಲಸಾಕ್ಷರತೆ ಹೆಚ್ಚಿಸಲು ಜಿಲ್ಲೆಗೊಂದು 'ರೈನ್ ಸೆಂಟರ್' ಬೇಕು





               "ನೀರಿನ ಪ್ರಸ್ತುತ ಸ್ಥಿತಿಗತಿಯ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ಬರಲಿರುವ ಕಠಿಣ ಪರಿಸ್ಥಿತಿ ಎದುರಿಸಲು ರಾಜ್ಯ ಸಜ್ಜಾಗಬೇಕಿದೆ.  ಜಲಸಾಕ್ಷರತೆಯ ಮೂಲಕ ಸಂರಕ್ಷಣೆಯ ಮಾರ್ಗದರ್ಶನಕ್ಕೆ, ನೀರಿನ ಮಿತಬಳಕೆಗೆ  ಜಾಗೃತಿ ಮೂಡಿಸಲು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ 'ರೈನ್ ಸೆಂಟರ್'ಗಳನ್ನು ತುರ್ತಾಗಿ ಆರಂಭಿಸಬೇಕು" ಎಂದು ರಾಜ್ಯದ ಜಲತಜ್ಞರು, ಪತ್ರಕರ್ತರು ಸರಕಾರವನ್ನು ಆಗ್ರಹಿಸಿದ್ದಾರೆ. ಶಿರಸಿಯ ಕಳವೆಯ ಕಾನ್ಮನೆಯಲ್ಲಿ ನಡೆದ ’ಜಲವರ್ತಮಾನ ಹಾಗೂ ನಾಳಿನ ಭವಿಷ್” ಕುರಿತ ಸಮಾಲೋಚನೆಯಲ್ಲಿ ಜಲಸಂರಕ್ಷಕರು, ಪತ್ರಕರ್ತರು ಜಲಕ್ಷಾಮದ ಸ್ಥಿಗತಿಗಳನ್ನು ಕೂಲಂಕುಶವಾಗಿ ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ.
            1983ರ ಬರಗಾಲದಿಂದ ಈವರೆಗೂ ರಾಜ್ಯದ ಒಂದಿಲ್ಲೊಂದು ಕಡೆ ಜಲಕ್ಷಾಮವಿದೆ. ಇಂದು ರಾಜ್ಯವ್ಯಾಪಿಯಾಗಿ ಭೀಕರ ಬರ ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಬರಕ್ಕೆ ಅಂಜದ ಶ್ರೀಸಾಮಾನ್ಯರು ಪ್ರತಿ ಜಿಲ್ಲೆಯಲ್ಲಿದ್ದಾರೆ. ನೀರಿನ ವಿಚಾರಗಳನ್ನು ಮಣ್ಣಿನಲ್ಲಿ ಕಾರ್ಯನಿರ್ವಹಿಸಿ ನೀರ ನೆಮ್ಮದಿ ಕಂಡವರಲ್ಲಿ ಚರ್ಚಿಸಬೇಕು, ಪಾಠ ಕಲಿಯಬೇಕು. ರಾಜ್ಯದ ಬರದ ತುರ್ತು ಸಂದರ್ಭದಲ್ಲಿ ಆಪತ್ಕಾಲಕ್ಕೆ ಆಗಬೇಕಾದ ಬುದ್ಧಿವಂತಿಕೆಯನ್ನು ಬದುಕಿನಲ್ಲಿ ಅಳವಡಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ಮಾಧ್ಯಮ ಹಾಗೂ ಕೃಷಿಕರಿಗೆ ಜಲಸಂರಕ್ಷಣೆಯ ಮಣ್ಣಿನ ಮಾದರಿ ದರ್ಶನಕ್ಕೆ ನೆರವಾಗುವಂತೆ ಬರ ಗೆದ್ದವರ, ನೀರುಳಿಸಿ ನೆಮ್ಮದಿ ಕಂಡವರ ವಿವರಗಳಿರುವ  'ಜಲಯೋಧರ  ಡೈರಕ್ಟರಿ' ಪ್ರಕಟಿಸಲು ಸಮಾಲೋಚನಾ ಸಭೆ ನಿರ್ಧರಿಸಿದೆ.                
              ರಾಜ್ಯದ ವಿವಿಧ ಪ್ರದೇಶಗಳಿಂದ ಜಲಸಂರಕ್ಷಕರು, ಕೃಷಿ ಸಾಧಕರು, ಜಲಪತ್ರಕರ್ತರು ಭಾಗವಹಿಸಿ ಜಲಪರಂಪರೆ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದರು. 20 ಗೋಷ್ಠಿಗಳಲ್ಲಿ ಸತತ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಿತು. ಕಳವೆಯ ಗ್ರಾಮ ಅರಣ್ಯ ಸಮಿತಿ, ಕರ್ನಾಟಕ ಅರಣ್ಯ ಇಲಾಖೆ ನೇತ್ರತ್ವದಲ್ಲಿ ನಡೆದ ಕಣಿವೆಕೆರೆ, ಕಟ್ ಅಗಳ, ಅರಣ್ಯಾಭಿವೃದ್ಧಿ ಸೇರಿದಂತೆ ವಿವಿಧ ಜಲಸಂರಕ್ಷಣಾ ರಚನಾತ್ಮಕ ಮಾದರಿಗಳನ್ನು ಜಲತಜ್ಞರು ವೀಕ್ಷಿಸಿದರು.
         ಸಮಾರೋಪ ಸಮಾರಂಭ - ಅಕ್ಟೋಬರ್ 4 ರವಿವಾರ ಸಾಯಂಕಾಲ ನಡೆಯಿತು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ ಭಾಗವಹಿಸಿದ್ದರು. "ಪರಿವರ್ತನೆಯೆಂಬುದು ಎಲ್ಲರೂ ಸೇರಿ ಜಾಗೃತರಾಗಿ ಹೋರಾಟದಿಂದ ನಡೆಯುವ ಕೆಲಸವಷ್ಟೇ ಅಲ್ಲ. ಶೇಕಡಾ ಐದರಷ್ಟು ಜನ ಸೇರಿ ರಚನಾತ್ಮಕ ಕಾರ್ಯ ಶುರುಮಾಡಿದರೂ ದೊಡ್ಡ ಸಾಧನೆ ಸಾಧ್ಯವಿದೆ. ಬರದ ಸಂದರ್ಭದಲ್ಲಿ  ಜಲ ಜಾಗೃತಿಯ ವಿಚಾರದಲ್ಲಿ  ರಾಜ್ಯದ ಜಲಸಂರಕ್ಷಣೆಯ ಪರಿಣಿತರು ಒಂದಾಗಿ ಕಳವೆಯ ಕಾನ್ಮನೆಯಲ್ಲಿ ಸಮಾಲೋಚನೆ ನಡೆಸುತ್ತಿರುವದು ಅತ್ಯಂತ ಮಹತ್ವದ ಸಂಗತಿಯಾಗಿದೆ" ಎಂದರು.
           ನೀರಿನ ಸಮಸ್ಯೆಗೆ ಬೃಹತ್ ಯೋಜನೆಗಳು ಮಾತ್ರ ಪರಿಹಾರವಲ್ಲ. ಬಿದ್ದ ಹನಿಯನ್ನು ಬಿದ್ದಲ್ಲಿ ಇಂಗಿಸುವ, ಹಿಡಿದಿಡುವ ಕೆಲಸ ಮುಖ್ಯವಿದೆ. ಚೆನೈ ನಗರದ ಮಳೆಕೊಯ್ಲು ಮಾದರಿಯಿಂದ ಪ್ರೇರಣೆ ಪಡೆದು ಬೆಂಗಳೂರು ನಗರದಲ್ಲಿ ನೀರಿಂಗಿಸುವದನ್ನು ಕಡ್ಡಾಯಗೊಳಿಸುವ ಪ್ರಯತ್ನ  ನಡೆದಿತ್ತು. ಕಾನೂನು ಬಿಗಿಗೊಳಿಸಿ ಪರಿಣಾಮಕಾರಿಯಾಗಿ ಜಲಸಂರಕ್ಷಣಾ ಮಾದರಿ ಅಳವಡಿಸಲು ಸರಕಾರ, ಸಾರ್ವಜನಿಕರು ಪ್ರಯತ್ನಿಸಬೇಕು. ಆಗ ಜಲಕ್ಷಾಮ ಎದುರಿಸಬಹುದು ಎಂದು ಮಸ್ಕಿ ನುಡಿದರು.
       "ನೀರಿಂಗಿಸುವ ಸಕಾಲಿಕ ಮಾರ್ಗದರ್ಶನ ನೀಡುವ ಕಾರ್ಯಕರ್ತರೇ ಕರ್ನಾಟಕ ದೊಡ್ಡ ಆಸ್ತಿ. ಇದರಿಂದಲೇ ಹಲವು ಹಳ್ಳಿಗಳು ಜಲಕ್ಷಾಮ ಎದುರಿಸಲು ಸಾಧ್ಯವಾಗಿದೆ.  ಎರಡು ದಶಕಗಳಿಂದ ಕೆಲಸ ನಡೆಯುತ್ತಿದೆ. ಕಣ್ಣು, ಕಿವಿ, ಹೃದಯವಿದ್ದ ಎಲ್ಲರಿಗೂ ಇಂದು ಜಲಸಂರಕ್ಷಣೆಯ ಮಹತ್ವ ತಿಳಿದಿದೆ, ಮಾಧ್ಯಮಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ. ಇಷ್ಟಾಗಿಯೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸದಿರುವದು ವಿಷಾದದ ಸಂಗತಿಯಾಗಿದೆ" ಎಂದು ಹಿರಿಯ ಪತ್ರಕರ್ತ ಶ್ರೀ'ಪಡ್ರೆ ಹೇಳಿದರು.
         "ಕರ್ನಾಟಕದಲ್ಲಿ ಈಗ ಪ್ರಪ್ರಥಮವಾಗಿ ನೆಲಮೂಲದಲ್ಲಿ ಕಾರ್ಯನಿರ್ವಹಿಸಿದವರು ಒಂದೆಡೆ ಸೇರಿದ್ದೇವೆ. ಶ್ರೀಸಾಮನ್ಯರು ಅಳವಡಿಸಬಹುದಾದ ಸುಲಭ ಸಾಧ್ಯ ವಿಧಾನಗಳನ್ನು  ಮಾಡಿತೋರಿಸಿದವರ ಅನುಭವ ಹಂಚಿಕೆ ನಡೆದಿದೆ. ನೀರಿನ ಸಮಸ್ಯೆ ರಾಜ್ಯ ರಾಜ್ಯಗಳನ್ನು  ಒಡೆಯುತ್ತಿದೆ, ನೀರಿಂಗಿಸುವ ರಚನಾತ್ಮಕ ಕೆಲಸ ಹೃದಯಗಳನ್ನು ಒಟ್ಟಿಗೆ ಸೇರಿಸುತ್ತಿದೆಯೆಂಬುದಕ್ಕೆ  ಬರದ ಸೀಮೆಯ ಜನಗಳೂ ಇಲ್ಲಿ ಸೇರಿರುವದು ಸಾಕ್ಷಿಯಾಗಿದೆ" ಎಂದರು.
            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಡಾ.ಪ್ರಕಾಶ್ ಭಟ್ ವಹಿಸಿದ್ದರು. "ಇಂದು ಒಬ್ಬ ಸಾಮಾನ್ಯ ಕಾರಿನ ಚಾಲಕನೂ ಮಹದಾಯಿ ನದಿ 'ಪಾಲ್ತೂ(ವ್ಯರ್ಥ)' ಆಗಿ ಸಮುದ್ರ ಸೇರುತ್ತಿದೆಯೆಂದು ಮಾತಾಡುತ್ತಿದ್ದಾನೆ. ಜಲಮೂಲ, ಅರಣ್ಯ ಸಂಬಂಧ, ಜೀವರಾಶಿಗಳ ತಿಳುವಳಿಕೆಯಿಲ್ಲದೇ ಮಾತಾಡುವ 'ಟಿಎಮ್ಸಿ ಮನಸ್ಥಿತಿ'ಯ ಹೋರಾಟದ ಪರಿಣಾಮವಿದು. ನೀರಿನ ಬಳಕೆ ಜ್ಞಾನ ವಿಸ್ತರಿಸುತ್ತಿರುವ ವರ್ತಮಾನದಲ್ಲಿ ನಮ್ಮ ಜ್ಞಾನ ನದಿ ಸಮುದ್ರ ಸೇರುವುದೇ ವ್ಯರ್ಥ ಎನ್ನುವದಕ್ಕೆ ಮಿತಿಗೊಂಡಿದ್ದು ಆತಂಕದ ಸಂಗತಿ" ಎಂದರು. ಇದನ್ನು ಬದಲಿಸಲು ಮಳೆನೀರಿನತ್ತ ಎಲ್ಲರ ಗಮನ ಸೆಳೆಯೋಣ ಎಂದರು.
         ಕೋಲಾರದ ದೊಡ್ಡ ಕಲ್ಲಹಳ್ಳಿಯ ಏಳು ವರ್ಷದ ಬಾಲಕಿ ಟ್ಯಾಂಕರ್ ನೀರಿಗೆ ನಿಂತಿದ್ದು ಕಂಡಾಗ ಕಾನ್ಮನೆಯ ಜಲವರ್ತಮಾನ ಕಾರ್ಯಕ್ರಮಕ್ಕೆ ಮುಖ್ಯ ಪ್ರೇರಣೆಯಾಯಿತು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಳೆದ 14 ವರ್ಷಗಳಿಂದ ಸತತವಾಗಿ ನಡೆಸುತ್ತಿರುವ ಕಾರ್ಯಕ್ರಮಗಳಿಂದ ನಮ್ಮ ಸಂಪರ್ಕಜಾಲ ರಾಜ್ಯದಲ್ಲಿ  ಬೆಳೆದಿದೆ. ನಾವು ಆಹ್ವಾನಿಸಿದ ಜಲತಜ್ಞರು, ಪತ್ರಕರ್ತರ ಭಾಗವಹಿಸುವಿಕೆಯಿಂದ ಮಾತುಕತೆ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಖೇನ ಜಲಜಾಗೃತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸೋಣವೆಂದು ಕಾರ್ಯಕ್ರಮ ಸಂಘಟಕ ಶಿವಾನಂದ ಕಳವೆ ಹೇಳಿದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೊಸಪಾಳ್ಯ ಸ್ವಾಗತಿಸಿದರು, ಪೂರ್ಣಪ್ರಜ್ಞ ಬೇಳೂರು ವಂದಿಸಿದರು.

Friday, August 21, 2015

ಕಬ್ಬಿನ ನಾಡಲ್ಲಿ ಭತ್ತದ ತಿಜೋರಿ

          "ರೈತರು ಬದಲಾವಣೆ ಬಯಸಿದರೆ ನಾವು ನಿಮ್ಮೊಂದಿಗಿದ್ದೇವೆ," ಸಹಜ ಸಮೃದ್ಧದ ಜಿ. ಕೃಷ್ಣಪ್ರಸಾದ್ ಮಂಡ್ಯದ ಬೀಜಮೇಳದಲ್ಲಿ ಘೋಷಿಸಿದಾಗ ಭತ್ತದ ಸಂರಕ್ಷಕ ಬೋರೇಗೌಡರು ಮತ್ತು ಸೈಯದ್ ಘನಿ ಖಾನ್ ಅವರ ಮುಖದಲ್ಲಿ ಕಿರುನಗೆ. ಈಚೆಗಂತೂ ಸಾವಿನ ಸುದ್ದಿಯಲ್ಲಿ ಬೆಳಗು ಕಾಣುತ್ತಿದ್ದ ಇವರಿಬ್ಬರೂ ತಮ್ಮೂರಿನ ಜನ ಬದಲಾವಣೆಯನ್ನು ಬಯಸುವ ಮನಃಸ್ಥಿತಿ ಹೊಂದಬಹುದು ಎಂಬ ಆಶೆಯಿಂದ ದೂರವಿದ್ದಾರೆ. "ಪ್ರಸ್ತುತದ ಸಂಕಟದ ಸ್ಥಿತಿಯನ್ನು ಅರ್ಥಮಾಡಿಕೊಂಡು  ಒಬ್ಬ ಬದಲಾದರೂ ಸಾಕು. ಅದೊಂದು ಮಾದರಿಯಾಗುತ್ತದೆ," ಎನ್ನುತ್ತಾರೆ ಘನಿ ಖಾನ್.
            ಮಂಡ್ಯದಲ್ಲೀಗ ಕಬ್ಬು ಸಿಹಿಯಾಗಿಲ್ಲ! ತೀರಾ ಕಹಿಯಾಗಿದೆ. ಕಹಿಯ ಗಾಢತೆಯು ಬದುಕಿನ ಆನಂದಕ್ಕೆ ಮುಸುಕು ಹಾಕಿದೆ. ನೆಮ್ಮದಿಯ ತೀರವನ್ನು ಸೇರಿಸುವ ದೋಣಿಯ ಹುಟ್ಟು ನೆರೆಯಲ್ಲಿ ಕೊಚ್ಚಿಹೋಗಿದೆ. ಕೈಗೆ ಸಿಗದಷ್ಟೂ ದೂರ ಸಾಗಿದೆ. ಅದು ಸಿಗಬಹುದು ಎಂದು ಬಿಂಬಿಸುವ, ನಂಬಿಸುವ ಸಾಮಾಜಿಕ-ರಾಜಕೀಯ ವ್ಯವಸ್ಥೆಗಳ ದಿಂಗಿಣದ ವೇಗ ಹೆಚ್ಚಾಗಿದೆ. ಈ ವೇಗಕ್ಕೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಾ ಪ್ರಾಣ ಕಳೆದುಕೊಂಡವರ ಸಂಖ್ಯೆ ಏರುತ್ತಿದೆ. ಇಂತಹ ಹೊತ್ತಲ್ಲೂ ಬದಲಾವಣೆ ಸಾಧ್ಯವೇ? ಮಂಡ್ಯದ ಬೀಜಮೇಳ ಮುಗಿಸಿ ಹೊರಟಾಗ ತಲೆತುಂಬಿದ ವಿಚಾರಗಳು.
            ಬದಲಾಗ್ತಾ ಇದ್ದಾರೆ. ಕಬ್ಬು ಮೈಗಂಟಿ ಹೋಗಿದೆ. ಬಿಡಿಸಲು ಸ್ವಲ್ಪ ಸಮಯ ಬೇಕು. ಇಂತಹ ಮೇಳಗಳು ಆಗಾಗ್ಗೆ ನಡೆಯುತ್ತಿರಬೇಕು. ಪರ್ಯಾಯ ದಾರಿಗಳ ಮಾದರಿಗಳು ಬೇಕು. ಅದರಲ್ಲಿ ಬದುಕನ್ನು ಕಟ್ಟಲು ಸಾಧ್ಯ ಎಂಬ ನಂಬುಗೆ ಬರಬೇಕು. ಇವೆಲ್ಲಾ ತಿಂಗಳಲ್ಲಿ ನಡೆಯುವ ಬದಲಾವಣೆಯಲ್ಲ. ಹಲವು ವರುಷ ಬೇಕಾದೀತು. ಬಹುಶಃ ಹೊಸ ತಲೆಮಾರಿಗೆ ಪರ್ಯಾಯ್ ದಾರಿಗಳನ್ನು ತೋರುವ ಕೆಲಸ ಆಗಬೇಕು, ತಮ್ಮೂರ ರೈತರ ವಿಷಾದ ಬದುಕಿಗೆ ದನಿಯಾಗುತ್ತಾರೆ,  ಆಶಾದಾಯಿ ಬೋರೇಗೌಡರು.
            ಸರಿ, ಮಾದರಿಗಳು ಬೇಕಾಗಿವೆ.  ಬೋರೇಗೌಡ, ಘನಿ ಖಾನ್ರಂತಹ ಭತ್ತದ ತಿಜೋರಿಗಳ ಮಾದರಿಗಳು ಕಬ್ಬಿನ ಮಧ್ಯೆಯೇ ಗಟ್ಟಿ ಅಡಿಗಟ್ಟಲ್ಲಿ ನಿಂತಿರುವಾಗ ಎಲ್ಲೆಲ್ಲೋ ಯಾಕೆ ಹುಡುಕಾಟ? ಬೋರೇಗೌಡ್ರು ಹೇಳ್ತಾರೆ, "ಅಯ್ಯೋ... ಅದೆಲ್ಲಾ ಬಿಡಿ. ಪಕ್ಕದ ಜಮೀನಿನ ರೈತ ಏನು ಮಾಡ್ತಾನೆ ಎಂದು ನೋಡುವಷ್ಟು ಪುರುಸೊತ್ತಿಲ್ಲ. ಕಬ್ಬಿನ ಹೊರತಾಗಿ ಏನಾದ್ರೂ ಪರ್ಯಾಯ ದಾರಿಗಳನ್ನು ಹುಡುಕಾಡಿದ್ರೆ ಅಪಹಾಸ್ಯದ ಉತ್ತರ ಸಿಗುತ್ತೆ. ಪಕ್ಕದ ಮನೆಯಲ್ಲಿ ಉತ್ತಮ ನಿರ್ವಿಷ ಅಕ್ಕಿ ಸಿಗುತ್ತೆ ಎಂದು ಗೊತ್ತಿದ್ದೂ ಅಂಗಡಿಯಿಂದ ಖರೀದಿಸಿ ತರುತ್ತಾರೆ. ಮಾದರಿಗಳನ್ನು ನೋಡಿ ಗೊತ್ತಿಲ್ಲ. ಇದು ಮಾದರಿ ಅಂತ ತಿಳಿಯುವ ಶಕ್ತಿಯನ್ನು ಕಬ್ಬು ಕಸಿದುಕೊಂಡಿದೆ."
            ಮಂಡ್ಯ ಸುತ್ತಮುತ್ತ ಬದಲಾವಣೆಯ ತಣ್ಣನೆಯ ಗಾಳಿ ಬೀಸಲು ಶುರುವಾಗಿದೆ. ಬೀಜಮೇಳಕ್ಕೆ ಆಗಮಿಸಿದ ಕೆಲವು ಕಬ್ಬುಪ್ರಿಯ ಕೃಷಿಕರು ಪರ್ಯಾಯ ಕೃಷಿಗೆ ಹೊರಳಲು ಮನಮಾಡಿದ್ದಾರೆ. ಮಾದರಿಗಳ ಹುಡುಕಾಟದಲ್ಲಿದ್ದಾರೆ. ಸಹಜ ಸಮೃದ್ಧ ರೈತರ ನೆರವಿಗೆ ಹೆಜ್ಜೆಯೂರಿದೆ. ಈಗಾಗಲೇ ಸ್ವಾವಲಂಬನೆಯ ಹಾದಿಯನ್ನು ಕಂಡುಕೊಂಡ ರೈತರೊಂದಿಗೆ ಸಂವಹನದ ಕೊಂಡಿ ಏರ್ಪಡಿಸಿದೆ. ಚಿಂತನೆಗಳು ಶುರುವಾಗಿದೆ. ಕೇಳುತ್ತಾ ಪರ್ಯಾಯ ಯೋಚನೆಯ ಬೀಜ ಮೊಳಕೆಯೊಡೆಯುತ್ತಿದೆ. ಹೊಟ್ಟೆ ತುಂಬಿಸುವ ಭತ್ತ, ಸಿರಿಧಾನ್ಯಗಳನ್ನು ಬೆಳೆಯುವ ಒಲವು ತೇಲಿಬರುತ್ತಿದೆ.
             'ಮೊದಲು ಹೊಟ್ಟೆಪಾಡು. ನಂತರ ಸ್ವಾವಲಂಬನೆ. ಆಮೇಲಷ್ಟೇ ಮಾರುಕಟ್ಟೆ', ಬೋರೇಗೌಡರು ಯಶದ ಸೂತ್ರವನ್ನು ಹೇಳುತ್ತಾ ವಾಸ್ತವದತ್ತ ಬೆರಳು ತೋರಿದರು. ಅನ್ನದ ಬಟ್ಟಲನ್ನು ಸೇರುವ ಆಹಾರಕ್ಕೆ ಮೊದಲ ಸ್ಥಾನ. ಅದರ ಹೊರತಾಗಿ ಇನ್ನೇನೋ ಬೆಳೆಯುತ್ತೇವೆ. ಕೋಟಿಗಟ್ಟಲೆ ಯೋಜನೆಗಳಿಗೆ ಸರಕಾರ ಸಹಿ ಹಾಕುತ್ತದೆ. ರೈತನಿಗೆ ಕನಸಿನ ಗೂಡನ್ನು ಕಟ್ಟಲು ಕೋಟಿ ರೂಪಾಯಿಗಳು ನೆರವಾಗುತ್ತವೆ. ಕಾಫಿ, ಚಹ, ರಬ್ಬರ್, ರೇಷ್ಮೆ, ಕಬ್ಬು.. ಬಟ್ಟಲು ಸೇರುವುದಿಲ್ಲ. ಇದಕ್ಕೆ ಎರಡನೇ ಆದ್ಯತೆ ಕೊಡಿ. ಭತ್ತ, ಸಿರಿಧಾನ್ಯದಂತಹ ಕೃಷಿಗೆ ಮೊದಲಾದ್ಯತೆ ಬೇಕು. ಆಗ ಅನ್ನಕ್ಕಾಗಿ ಪರರ ಮುಂದೆ ಅಂಗಲಾಚುವ ಸ್ಥಿತಿ ಬಾರದು. ಸಮಾಜಕ್ಕೆ ಅನ್ನ ಕೊಡುವ ಅರ್ಹತೆಯಿದ್ದೂ ಅಂಗಡಿಯ ಮುಂದೆ ಕ್ಯೂ ನಿಲ್ಲುವ ದಾರಿದ್ರ್ಯ ಸ್ಥಿತಿಯಿಂದ ಹೊರ ಬರಬಹುದು. ವರುಷಪೂರ್ತಿ ಉಣ್ಣಲು ಅನ್ನ ಸಿದ್ಧವಾದಾಗ ಹಣ ಕೊಡುವ ಇತರ ಬೆಳೆಗಳನ್ನು ಬೆಳೆಯುವಂತಾಗಬೇಕು.
             ಖಚಿತ ಮತ್ತು ನೇರ ಮಾತಿನ ಗೌಡರಿಗೆ ತನ್ನ ಬದುಕೇ ಧೈರ್ಯ ಮತ್ತು ಪ್ರೇರಣೆ. ಎಲ್ಲರಂತೆ ಏಕಬೆಳೆ ಕಬ್ಬಿನಿಂದ ಮಿಶ್ರಬೆಳೆಯತ್ತ ಬದಲಾದ ಕೃಷಿಕ. ರಾಸಾಯನಿಕದಿಂದ ಸಾವಯವದತ್ತ ಪರಿವರ್ತನೆಗೊಂಡ ರೈತ. ಬೆಳೆದ ಅಕ್ಕಿಯನ್ನು ಸ್ವತಃ ಉಂಡು, ಇತರರಿಗೂ ಉಣಿಸುವ ಭತ್ತದ ಸಂರಕ್ಷಕ. ಭತ್ತದ ಜತೆಯಲ್ಲಿ ಸಿರಿಧಾನ್ಯವನ್ನೂ ಬೆಳೆಯುವ ಗಟ್ಟಿಗ. ರಾಸಾಯನಿಕ ರಹಿತವಾಗಿ ಕಬ್ಬನ್ನು ಬೆಳೆದು ಬೆಲ್ಲ ತಯಾರು ಮಾಡಿ ಸಿದ್ಧ ಮಾರುಕಟ್ಟೆಯನ್ನು ರೂಪಿಸಿದ ಸಾಹಸಿ. ಮಡದಿ ಹೇಮಾ ಅವರ ಅಡುಗೆ ಮನೆಯಲ್ಲಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧವಾಗುತ್ತಿರುತ್ತದೆ. ಅಣ್ಣನಿಗೆ ತಮ್ಮ ಶಂಕರ್ ಹೆಗಲೆಣೆ.
            "ಸಾವಯವ ಅಂದ್ರೆ ನಗ್ತಾರೆ. ರಾಸಾಯನಿಕ ರಹಿತವಾಗಿ ನಮ್ಮ ಆಲೆಮನೆಯಲ್ಲಿ ಬೆಲ್ಲ ಸಿದ್ಧಪಡಿಸಿದ್ರೆ ಇದು ಬೆಲ್ಲಾನಾ ಅಂತ ಹಗುರ ಮಾತನಾಡ್ತಾರೆ. ಯಾರು ಏನೇ ಮಾತಾಡ್ಲಿ, ನಾನಂತೂ ಬದಲಾಗಿದ್ದೀನಿ.  ನಮ್ಮ ಕುಟುಂಬ ಬದಲಾಗಿದೆ. ಆಹಾರದ ವಿಚಾರದಲ್ಲಿ ನಾವು ಖುಷಿಯಾಗಿದ್ದೀವಿ," ಬೋರೇಗೌಡರು ತಮ್ಮ ಶಂಕರ ಅವರ ಮನೆಯ ಮಹಡಿಗೆ ಕರೆದೊಯ್ದು, 'ಇದೇ ನಮ್ಮ ಭತ್ತದ ಮ್ಯೂಸಿಯಂ. ದೇಶ ಅಲ್ಲ, ವಿದೇಶದಿಂದ ಭತ್ತ ಪ್ರಿಯರು ಭೇಟಿ ನೀಡಿದ್ದಾರೆ. ಹೊರ ಊರಿನ ವಿಜ್ಞಾನಿಗಳು ಬಂದಿದ್ದಾರೆ. ಆದರೆ ಕೂಗಳತೆ ದೂರದಲ್ಲಿದ್ದ ಸಂಶೋಧನಾ ಸಂಸ್ಥೆಗೆ ಮಾತ್ರ ನಮ್ಮ ಭತ್ತದ ಪರಿಮಳ ತಲುಪಿಲ್ಲ, ಎಂದು ಮೌನವಾದರು.
              ಹನ್ನೆರಡು ವರುಷದಿಂದ ಭತ್ತದ ನಂಟು. ದಕ್ಷಿಣ ಕನ್ನಡ ಜಿಲ್ಲೆಯ ಅಮೈ ದೇವರಾಯರಿಂದ ಪ್ರೇರಿತ. ಅವರು ನೀಡಿದ ನಾಲ್ಕು ವಿಧದ ಭತ್ತದ ತಳಿಯಿಂದ ಭತ್ತದ ಗುಂಗು. ಹತ್ತಿರದಲ್ಲೇ ಘನಿ ಖಾನ್ ಅವರ ಏಳುನೂರು ಭತ್ತದ ವೆರೈಟಿಯ ತಾಕುಗಳು ಮ್ಯೂಸಿಯಂ ಮಾಡಲು ಉತ್ತೇಜನ ಕೊಟ್ಟಿತು. ಅಕಾಲ ಋತುವಿನಲ್ಲಿಯೂ ಭತ್ತದ ತಳಿಗಳು ನೋಡಲು ಸಿಗುವಂತೆ ಮ್ಯೂಸಿಯಂ ರೂಪುಗೊಳ್ಳಬೇಕು ಎಂಬ ಆಶಯ. ಸಾಕಷ್ಟು ತಳಿಗಳನ್ನು ತಾನೇ ಬೆಳೆದರು. ದೇಶದಲ್ಲೆಡೆ ಓಡಾಡಿದರು. ಸಹಜ ಸಮೃದ್ಧ ಸಾಥ್ ನೀಡಿತು. ಭತ್ತದ ಸಂರಕ್ಷಕರ ಪರಿಚಯವಾಯಿತು. ಬೀಜಗಳು ವಿನಿಮಯ ಗೊಂಡುವು. ಈಗ ಅವರ ಮ್ಯೂಸಿಯಂನಲ್ಲಿ ಇನ್ನೂರಕ್ಕೂ ಮಿಕ್ಕಿ ಭತ್ತದ ತಳಿಗಳಿವೆ. ಮೂವತ್ತಕ್ಕೂ ಮಿಕ್ಕಿ ರಾಗಿಗಳ ಸಂಗ್ರಹವಿದೆ. ಎಲ್ಲವೂ ನೋಡಲು ಮಾತ್ರ.
            ಸಸಿಯಲ್ಲಿ ಬೇರು, ಮಣ್ಣು ಸಹಿತವಾಗಿ ತಳಿಗಳನ್ನು ಜೋಪಾನವಾಗಿಟ್ಟಿದ್ದಾರೆ. ಮಾನವ ಸ್ಪರ್ಶದಿಂದ ದೂರವಿದ್ದರೆ ತೆನೆಯಲ್ಲಿರುವ ಕಾಳುಗಳು ತಾಜಾತನ ಕಳೆದುಕೊಳ್ಳುವುದಿಲ್ಲ. ಭತ್ತ ಕೃಷಿಯ ಸಂಸ್ಕೃತಿಯನ್ನು ಸಾರುವ ಗೋಡೆಬರೆಹಗಳಿವೆ. ಕೃಷಿ ಕೆಲಸಗಳಿಗೆ ತೊಂದರೆಯಾಗುತ್ತಿದ್ದರೂ ಆಸಕ್ತರಿಗೆ ಸ್ವತಃ ನಿಂತು ತಳಿಗಳ ಗುಣವಿಶೇಷಗಳನ್ನು ವಿವರಿಸುವ ಸಹಿಷ್ಣು. 'ಕಣದ ತುಂಬ ಮತ್ತು ಸಿದ್ಧಸಣ್ಣ' ಎಂಬ ತಳಿಗಳೆರಡನ್ನು ಅಭಿವೃದ್ಧಿ ಪಡಿಸಿದ್ದಾರೆ. ಸಿದ್ಧಸಣ್ಣವು ಎಕ್ರೆಗೆ ಇಪ್ಪತ್ತೇಳು ಕ್ವಿಂಟಾಲ್ ಇಳುವರಿ ನೀಡುವ ಸಣ್ಣಕಾಳಿನ ಭತ್ತ.
               ನಮ್ಮ ಹೊಲಕ್ಕೆ ದೂರದೂರಿಂದ ಜನ ಬರ್ತಾರಲ್ಲಾ.. ಅದನ್ನು ನೋಡಿ ಇವನಿಗೇನೋ ಲಾಭವಿರ್ಬೇಕು. ಇಲ್ಲಾಂದ್ರೆ ಜನ ಯಾಕೆ ಬರ್ತಾರೆ? ಅಂತ ಕಟಕಿಯಾಡಿದ್ರು. ಈ ಮಧ್ಯೆ ಬೋರೇಗೌಡ ಏನೋ ಸಾದ್ನೆ ಮಾಡಿದ್ದಾನೆ ಅಂತ ನೋಡಲು ಬಂದವರು ಭತ್ತದತ್ತ ಆಸಕ್ತರಾಗಿದ್ದಾರೆ, ಎನ್ನುವ ಬೋರೇಗೌಡರಲ್ಲಿ ತನ್ನೂರು ಮತ್ತು ಕೃಷಿಕರು ಬದಲಾಗಬೇಕು ಎನ್ನುವ ದೂರದೃಷ್ಟಿ ಮಿಂಚಿ ಮರೆಯಾಯಿತು. ಇಂದಲ್ಲ ನಾಳೆ ಪಯರ್ಾಯ ಬೆಳೆಗಳತ್ತ ಕೃಷಿಕರು ಬದಲಾಗಿಯೇ ಆಗ್ತಾರೆ ಎನ್ನುವ ದೃಢ ವಿಶ್ವಾಸವೂ ಗೌಡರಿಗಿದೆ.
             ಒಂದೆಡೆ ಸೈಯದ್ ಘನಿ ಖಾನ್, ಇನ್ನೊಂದೆಡೆ ಭತ್ತದ ಬೋರೇಗೌಡರು. ತಿನ್ನಲು ಅಕ್ಕಿ, ಕುಡಿಯಲು ನೀರು, ಒರಗಲೊಂದು ದಿಂಬು. ಇವಿಷ್ಟಿದ್ದರೆ ಆನಂದ, ಎಂದು ಚೀನೀ ದಾರ್ಶನಿಕರೊಬ್ಬರ ಮಾತಿನ ಸಾಕಾರ ಈ ಇಬ್ಬರು ಭತ್ತ ಸಂರಕ್ಷಕರಲ್ಲಿ ಕಂಡೆ. ಮಂಡ್ಯದಲ್ಲಿ ಈ ಎರಡು ಮಾದರಿಗಳು ಕಬ್ಬಿನ ಮಧ್ಯೆ ಸಿಹಿಯ ಕಂಪನ್ನು ಬೀರುತ್ತವೆ. ಬದಲಾವಣೆಯ ಬಾಗಿಲನ್ನು ತೆರೆದಿಟ್ಟಿದೆ. ಬದಲಾವಣೆ ಬಯಸುವ ರೈತರಿಗೆ ಮುಕ್ತ ಪ್ರವೇಶವನ್ನು ಕಾದಿಟ್ಟಿದೆ.
(ಚಿತ್ರ : ಸಹಜ ಸಮೃದ್ಧ )

Thursday, August 13, 2015

Jack Seed Kure, A trial production from CARD KVK Pathnamthitta




In a recent function at CARD KVK Pathnamthitta, StateMinister for Agriculture Shri KP Mohanan was offered a surprise product made using Jackfruit Seed.

Jack Seed Kure doesn’t have maida. It has cereal flour, Jack Seed Flour, Corn flour,  salt and spices. No preservatives and additives.
A healthy alternative in the offing!

CARD-KRISHI VIGYAN KENDRA (0469) 266 2094, 266 1821;
cardkvk@yahoo.com
CARD KVK’s website: http://www.kvkcard.org

(Courtesy : Shree Padre)

Woman Jackfruit Entrepreneur from Thiruvananthapuram


Mini Udayakumar,  a Thiruvananthapuram (Kerala) housewife took training in Jackfruit Value Addition from CARD KVK Pathnamthitta six months ago and has straightaway plunged into production.

She makes Chakka Varatty, JF Mixture, Halwa, Jam, Jelly and few other products – but only jackfruit products. She has to buy fruits from neighbourhood or from Market. On an average, she shells out around 100 to 150 Rs for a firm fleshed (Varikka) jackfruit. Soft-fleshed ones are available damn cheap at Rs 25.

Mini’s hubby Udayakumar helps her. Mini is selling her products throw ‘Swadeshi’ for the time being. The couple have decided to start their own unit & brand very shortly.

                                                                      Phone : 90205  566123

(Courtesy : Shree Padre)

Monday, July 27, 2015

ಬದುಕಿನ ಹಳಿ ಜಾರುತ್ತಿದೆ, ಕೈತಾಂಗು ಬೇಕಾಗಿದೆ!

                 ಮ್ಯಾಗಿ ಬೂದಿಯಾಗುತ್ತಿದ್ದಂತೆ ಅದಕ್ಕಂಟಿದ ಕಳಂಕ ಮಸುಕಾಗುತ್ತಿದೆ! ಕಂಪೆನಿಯೇ ಕೋಟಿಗಟ್ಟಲೆ ಉತ್ಪನ್ನವನ್ನು ಸುಡುತ್ತಿದೆ. ಮ್ಯಾಗಿ ಮರೆವಿಗೆ ಜಾರುತ್ತಿರುವಾಗಲೇ ಆಹಾರ ಕಲಬೆರಕೆಯ ನಿರಾಕಾರ ಮುಖಗಳ ಸಾಕಾರತೆಯ ಗೋಚರ.  ಇವೆಲ್ಲಾ ಗೊತ್ತಿದ್ದೂ ಒಪ್ಪಿಕೊಂಡ ಮನಃಸ್ಥಿತಿ. ಒಂದು ಸಂಸ್ಕೃತಿಯನ್ನು ಹಾಳುಮಾಡಲು ಅಲ್ಲಿನ ಭಾಷೆ ನಾಶವಾದರೆ ಸಾಕಂತೆ. ಮನುಕೋಟಿ ನಾಶವಾಗಲು ಬಾಂಬ್ಗಳು, ಅಣ್ವಸ್ತ್ರಗಳು ಬೇಡ. ಆಹಾರ ವಿಷವಾದರೆ ಸಾಕು. ನಾವೆಲ್ಲಾ ಈ ಜಾಡಿನ ಜಾರುವ ಬದುಕಿನ ಹಳಿಯಲ್ಲಿ ವಾಲುತ್ತಿದ್ದೇವೆ.
                ವಾಹಿನಿಗಳನ್ನು ಆಗಾಗ್ಗೆ ಇಣುಕುತ್ತಿರುತ್ತೇನೆ. ಹಿಂಜುವ ಧಾರಾವಾಹಿ ಭರಾಟೆಯ ಮಧ್ಯೆಯೂ ಆಹಾರ ಸೇರಿರುವ ವಿಷಗಳ ಘೊರತೆಯ ಪ್ರಸಾರ. ಅಧ್ಯಯನ ವರದಿಗಳ ಬಿತ್ತರ. ಕಲಬೆರಕೆ ವ್ಯವಹಾರದ ಬಯಲು. ಲೋಕಕ್ಕೂ ತಮಗೂ ಸಂಬಂಧವಿಲ್ಲದಂತಿರುವ ಕಾಳಸಂತೆಕೋರರ ದರ್ಶನ. ಬೆಣ್ಣೆ, ಸಾಸ್, ಹಾಲು, ಐಸ್ಕ್ರೀಮ್, ಎಣ್ಣೆ... ಕೃತಕಗಳ ಮಾಲೆಗಳ ಯಶೋಗಾಥೆ ಬರುತ್ತಿದ್ದಾಗ ಚಾನೆಲ್ ಬದಲಾಯಿಸುತ್ತೇವೆ! ಕನಿಷ್ಠ ಅರಿವಿನ ದೃಷ್ಟಿಯಿಂದಲಾದರೂ ನೋಡಬಾರದೇ. ಮಕ್ಕಳಿಗೂ ತೋರಿಸಬಾರದೆ? ಬೆಳೆಯುತ್ತಿರುವ ಕಂದಮ್ಮಗಳ ಭವಿತವ್ಯಕ್ಕಾದರೂ ಆಹಾರದ ಅರಿವನ್ನು ಹೆಚ್ಚಿಸಿಕೊಳ್ಳಲೇಬೇಕಾಗಿದೆ.
               ಬಣ್ಣ ಹಾಕಿದ ಉಣ್ಣುವ ಅಕ್ಕಿಯಿಂದ ಬೇರ್ಪಟ್ಟ ಬಣ್ಣದೊಳಗೆ ಆರೋಗ್ಯದ ಗುಟ್ಟಿಲ್ಲ. ವಿಷ ಮಜ್ಜನದಿಂದ ಮಿಂದು ಅಡುಗೆ ಮನೆ ಸೇರಿದ ತರಕಾರಿಗಳಲ್ಲಿ ಸ್ವಾಸ್ಥ್ಯದ ಸೋಂಕಿಲ್ಲ. ಹಾಲೆನ್ನುತ್ತಾ ಹಾಲಾಹಲವನ್ನು ಕುಡಿಸುವ ಪ್ಯಾಕೆಟ್ಟಿನಲ್ಲಿ ಸದೃಢ ಭವಿಷ್ಯವಿಲ್ಲ. ಇಂತಹ ಇಲ್ಲಗಳ ಮಧ್ಯೆ ಈಗ ಹೊಕ್ಕಿದೆ - 'ಪ್ಲಾಸ್ಟಿಕ್ ಅಕ್ಕಿ'ಯ ಗುಮ್ಮ. ಚೀನದಿಂದ ಹಾರಿ ಭಾರತ ಸೇರಿದೆ. ವಿಯೆಟ್ನಾಂ, ಇಂಡೋನೇಶ್ಯಾ, ಮಲೇಶ್ಯಾ, ಸಿಂಗಾಪುರದಲ್ಲೂ ತಲ್ಲಣವನ್ನುಂಟುಮಾಡಿದೆ. ಬಹುಶಃ ಇಂದಲ್ಲ, ಹಲವು ವರುಷಗಳಿಂದಲೇ ಈ ಜಾಲ ಅಜ್ಞಾತವಾಗಿ ಜೀವಂತವಾಗಿದ್ದಿರಬಹುದು.
               ಅಕ್ಕಿಯೊಂದಿಗೆ ಕೃತಕ ಪ್ಲಾಸ್ಟಿಕ್ ಅಕ್ಕಿಯನ್ನು ಮಿಶ್ರ ಮಾಡಿದರೂ ಗೊತ್ತಾಗದಂತಹ ತಾಜಾತನ. ಸಿಹಿ ಗೆಣಸು, ಪ್ಲಾಸ್ಟಿಕ್, ಕೃತಕ ರಾಸಾಯನಿಕ ಅಂಟು ಇದರ ಒಳಸುರಿ. 'ಮೂರು ಬೌಲ್ ಪ್ಲಾಸ್ಟಿಕ್ ಅಕ್ಕಿಯ ಅನ್ನವನ್ನು ತಿಂದರೆ ಒಂದು ಪ್ಲಾಸ್ಟಿಕ್ ಚೀಲ ತಿಂದ ಸಮವಂತೆ!' ವಿಷವನ್ನು ತಿಂದು ತಿಂದು ವಿಷದ ಕೊಂಪೆಯಾದ ನಮ್ಮ ದೇಹವು ಪ್ಲಾಸ್ಟಿಕನ್ನು ಕೂಡಾ ಕರಗಿಸಬಲ್ಲುದು! ಸಿಂಥೆಟಿಕ್ ಅಕ್ಕಿಯ ಹಿಂದಿನ ಆರ್ಥಿಕ ವ್ಯವಹಾರದೊಳಗೆ ಮನುಕುಲದ ನಾಶದ ಬ್ಯಾಲೆನ್ಸ್ ಶೀಟ್ ಇದೆ.
ಚೀನಾ ಯಾಕೆ, ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿರುವ ಉತ್ಪನ್ನಗಳನ್ನು ಸಾಚಾ ಎನ್ನಲು ಧೈರ್ಯ ಬರುವುದಿಲ್ಲ. ಈಚೆಗೆ ರಾಜಧಾನಿಯಿಂದ ಬಂಧುವೊಬ್ಬರು ರಾಗಿಯನ್ನು ತಂದಿದ್ದರು. ನೀರಿನಲ್ಲಿ ತೊಳೆದಾಕ್ಷಣ ಅರ್ಧಕ್ಕರ್ಧ ಕಾಳುಗಳು ಬಿಳುಪಾದುವು. ಅದಾವುದೋ ಕಾಳು ರೂಪದ, ಥೇಟ್ ರಾಗಿಯನ್ನೇ ಹೋಲುವ ಬಿಳಿ ಹರಳುಗಳು. ಬಣ್ಣ ಮಿಶ್ರಿತ ನೀರಿಗೂ ಕಮಟು ವಾಸನೆ. ಕೈಗಂಟಿದ ಬಣ್ಣ ತೊಳೆದುಹೋಗದಷ್ಟು ಗಾಢ. ಅವರಿಗೆ ತಿಳಿಸಿದಾಗ, ಇಲ್ಲಾರಿ..... ನಾವು ಮನೆಯಲ್ಲಿ ಅದನ್ನೇ ಬಳಸೋದು. ನಮಗೇನೂ ಆಗಿಲ್ಲ. ಅದು ರಾಗಿಯ ಸಹಜ ಬಣ್ಣವಲ್ವಾ.. ಎಂದಾಗ ಸುಸ್ತಾದೆ.
               ಹಿಂದೊಮ್ಮೆ ಕೇರಳದಲ್ಲಿ ಕಾಳುಮೆಣಸು ಮಾರುವ ದಲ್ಲಾಳಿಗಳು ಮಾಡಿದ ಎಡವಟ್ಟು ಹಸಿಯಾಗಿದೆ. ಐವತ್ತು ಟನ್ ಕಾಳುಮೆಣಸಿಗೆ ಡೀಸಿಲ್ ಮಿಶ್ರ ಮಾಡಿದ್ದರು. ತೇವದಿಂದಾಗಿ ಬೂಸ್ಟ್ ಹಿಡಿಯಬಹುದೆಂಬ ಭಯ.  ದೀರ್ಘ ತಾಳಿಕೆಯ ದೂರದೃಷ್ಟಿ. ವಿದೇಶಕ್ಕೆ ರಫ್ತಾದ ಉತ್ಪನ್ನವು ಪುನಃ ಮರಳಿದಾಗ ಆಡಳಿತ ಚುರುಕಾಯಿತು. ಅಧಿಕಾರಿಗಳು ಟೈ ಸರಿಮಾಡಿಕೊಂಡರು. ಕಲಬೆರಕೆ ಪತ್ತೆಯಾಯಿತು. ಸುಮಾರು ಮೂವತ್ತೆಂಟು ಕೋಟಿಗೂ ರೂಪಾಯಿಗೂ ಮಿಕ್ಕಿದ ಕಾಳುಮೆಣಸನ್ನು ಸುಡುವ ಆದೇಶಕ್ಕೆ ಸಹಿ ಬಿತ್ತು.
              ಕುಡಿಯುವ ನೀರಿನಿಂದ ಅನ್ನದ ಬಟ್ಟಲ ತನಕ ಮಿಳಿತವಾದ ವಸ್ತುಗಳಲ್ಲಿ ಕಲಬೆರಕೆಯಿದೆ ಎಂಬ ಸತ್ಯವನ್ನು ಆರೋಗ್ಯ ಸಚಿವರೇ ಒಪ್ಪಿಕೊಂಡ ಹೇಳಿಕೆಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ರಾಗಿಹಿಟ್ಟು, ಹೆಸರುಬೇಳೆ, ಅಡುಗೆ ಎಣ್ಣೆ, ಚಹ, ಕಾಫಿ, ಹಾಲು, ಸಾಸ್, ಅವಲಕ್ಕಿ... ಹೀಗೆ ನೂರರ ಹತ್ತಿರ ಉತ್ಪನ್ನಗಳಿಗೆ ಸಾಚಾ ಲೇಬಲ್ ಹಚ್ಚಲು ಕಷ್ಟವಾಗುವಷ್ಟು ಜಾಲ ವಿಸ್ತೃತವಾಗಿದೆ. ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಡ್ಡಿಕೊಂಡ ಉತ್ಪನ್ನಗಳು ಅಯೋಗ್ಯವೆಂದು ಛೀಮಾರಿ ಹಾಕಿಸಿಕೊಂಡಿವೆ! ಯೋಚಿಸಲಾಗದಷ್ಟು ಬೃಹತ್ತಾಗಿ ಬೆಳೆದ ಕರಾಳ ಲೋಕದ ನೆರಳಿನಿಂದ ಬದುಕಿನ ಹಳಿ ತಪ್ಪುತ್ತಿದೆ. ಕೈತಾಂಗು ಬೇಕಾಗಿದೆ.
               ಆಹಾರದಲ್ಲಿ ಕಲಬೆರಕೆ ಹೊಸ ವಿಷಯವಲ್ಲ. ರಾಜಾರೋಷವಾಗಿ ನಡೆಯುವ ವ್ಯವಸ್ಥಿತ ವ್ಯವಹಾರ. ಸರಕಾರದ ವರಿಷ್ಠರಿಂದ ಅಂಗಡಿ ಮಾಲಕನ ತನಕದ ಕೈಗಳ ಕೈವಾಡ. ಅಕ್ಕಿಗೆ ಬಣ್ಣ, ಹಾಲಿಗೆ ಬಿಳಿ ವರ್ಣದ ಇನ್ನೇನೋ, ಸಕ್ಕರೆಯೊಂದಿಗೆ ಮಿಶ್ರವಾಗುವ ಅದಾವುದೋ ಹರಳು.. ಹೀಗೆ ಗುರುತು ಹಿಡಿಯದಷ್ಟು ಜಾಣ್ಮೆಯ ಕರಾಮತ್ತು. ಅಪರೂಪಕ್ಕೊಮ್ಮೆ ಅಲ್ಲಿಲ್ಲಿ ಪತ್ತೆಯಾಗುತ್ತದೆ. ಕೇಸ್ ದಾಖಲಾಗುತ್ತದೆ. ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ನ್ಯಾಯಾಲಯದ ಮೆಟ್ಟಿಲು ಏರುತ್ತದೆ. ಆಮೇಲೆ ಏನಾಗುತ್ತದೆ ಅಂತ ಗೊತ್ತಿಲ್ಲ.
                  ಆಹಾರದ ಕಲಬೆರಕೆಯನ್ನಷ್ಟೇ ಮಾತನಾಡುತ್ತೇವೆ. ಹಿಂದೆ ತಿರುಗಿ ನೋಡಿ. ಆಹಾರ ಉತ್ಪಾದನೆ ಮಾಡುವ ಹೊಲದಿಂದ ತೊಡಗಿ, ಯಾಂತ್ರೀಕರಣದ ವರೆಗೆ ಕಲಬೆರಕೆಯ ಮಾಲೆ ಮಾಲೆ. ಬೇಕೋ, ಬೇಡವೋ ಹೊಲಗಳಿಗೆ ರಾಸಾಯನಿಕ ಬೆರಕೆ ಮಾಡಿದೆವು. ಕೀಟನಾಶಕವನ್ನು ಸುರಿದೆವು. ಬಿತ್ತನೆಬೀಜ ಮೊಳಕೆ ಬಾರದ ದೃಷ್ಟಾಂತ ಎಷ್ಟು ಬೇಕು? ನೀರಿನಲ್ಲೂ ಕಲಬೆರಕೆಯಿಲ್ವಾ. ಸೇವಿಸುವ ಗಾಳಿಯೂ ಕಲ್ಮಶ. ಹಾಲಿಗೆ ನೀರು ತಾನಾಗಿ ಹರಿದು ಬರುವುದಿಲ್ಲವಲ್ಲಾ-ಅಲ್ಲೂ ಬೆರಕೆಯ ಭೂತ. ಹಾಲಿಗೆ ಅದಾವುದೋ ಪುಡಿ ಬೆರೆಸಿ 'ದಪ್ಪ ಹಾಲು' ಮಾರುವ ನಿಪುಣರು ಎಷ್ಟಿಲ್ಲ?
               ಬಳಸುವ ಯಂತ್ರೋಪಕರಣಗಳಲ್ಲೂ ಕಲಬೆರಕೆ! ಲಕ್ಷಗಟ್ಟಲೆ ಹಣ ತೆತ್ತರೂ ಅಸಲಿ ಪಡೆಯಲು ತ್ರಾಸ.   ಸಬ್ಸಿಡಿ ಫೈಲುಗಳು ಮಾಡುವ ರಾದ್ದಾಂತಗಳೇ ಬೇರೆ. ಪ್ರದರ್ಶಿಸುವುದು ಅಸಲಿ. ಬಿಕರಿ ಮಾಡುವುದು ನಕಲಿ. ಮನುಷ್ಯನ ಮನಃಸ್ಥಿತಿಯಲ್ಲೂ ಗೊಂದಲ. ಸಾಚಾತನದ ಯೋಚನೆಯಿಲ್ಲ. ದಿಢೀರ್ ಹಣ ಮಾಡುವ ಚಿತ್ತಸ್ಥಿತಿ. ಇದ್ದ ಸಂಪನ್ಮೂಲವನ್ನು ವೃದ್ಧಿಸುವ ಯೋಜನೆ. ಆಗ ಕೆಟ್ಟ ಯೋಚನೆಯ ಬೀಜದ ಮೊಳಕೆ. ಮೊಳಕೆಯೊಡೆದು ಮರವಾದರೆ ಸಾಕು, ಕಳಚಿಕೊಳ್ಳದಷ್ಟು ಬೇರುಗಳನ್ನು ಬದುಕಿನಲ್ಲಿ ಇಳಿಸಿರುತ್ತದೆ. ಜೀವನದ ರೂಪೀಕರಣದ ರೂಪವೇ ಹೀಗಿದ್ದ ಮೇಲೆ ಕಲಬೆರಕೆಯ ಭೂತವನ್ನು ಹೊಡೆದೋಡಿಸುವುದು ಹೇಗೆ?
              'ಗ್ರಾಹಕರೇ ದೇವರು' ಎಂಬ ಫಲಕ ಅಂಗಡಿಯಲ್ಲಿ ನೋಡಿದ್ದೇನೆ. ಸರಿ, ದೇವರು ಮಾತನಾಡುವುದಿಲ್ಲವಲ್ಲಾ! ಭಕ್ತನ ಕೋರಿಕೆಯನ್ನು ಈಡೇರಿಸುವುದು ದೇವರ ಕೆಲಸ! ಭಕ್ತನ ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳಲಾಗದ ಅಸಹಾಯಕತೆ. ನೋಡಿಯೂ ನೋಡದಂತಿರಬೇಕಾದ ಸ್ಥಿತಿ. ಆಮಿಷಗಳ ಮಹಾಪೂರ. ರಿಯಾಯಿತಿಗಳ ಕೊಡುಗೆ. ಹೊಗಳಿಕೆಯ ಹೊನ್ನಶೂಲ. ಬೇಡದಿದ್ದರೂ ಸಾಲ ಸೌಲಭ್ಯ. ದೇವರಿಗೆ ಇನ್ನೇನು ಬೇಕು? ದಿವ್ಯ ಮೌನ.
               ಭಾರತದಲ್ಲಿ ಆಹಾರ ಸುರಕ್ಷತೆ ಕಾಪಾಡಿಕೊಳ್ಳಲು ಜಾರಿಯಲ್ಲಿದ್ದ 'ಆಹಾರ ಕಲಬೆರಕೆ ತಡೆ ಕಾಯ್ದೆ-1954', ನಿಯಮಗಳು-1955 ಹಾಗೂ ಇತರ ಆಹಾರ ಸಂಬಂಧದ ಕಾಯ್ದೆಗಳನ್ನು ರದ್ದು ಪಡಿಸಿ ಹೊಸದಾಗಿ ಏಕೀಕೃತವಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006' ನಿಯಮಗಳು, ನಿಬಂಧನೆಗಳನ್ನು 2011 ಆಗಸ್ಟಿನಿಂದ ಜಾರಿಗೆ ತಂದಿದೆ. ತಿನ್ನಲು ಯೋಗ್ಯವಲ್ಲದ, ಹಾನಿಕಾರಕ, ನಕಲಿ ಪದಾರ್ಥಗಳನ್ನು ಬೆರೆಸುವುದು ತಪ್ಪೆಂದು ಒತ್ತಿ ಹೇಳಿದೆ. ಅನೈರ್ಮಲ್ಯ ವಾತಾವರಣದಲ್ಲಿ ಉತ್ಪನ್ನ ತಯಾರಿಕೆ, ಆಹಾರದಲ್ಲಿ ಪೌಷ್ಟಿಕತೆಯನ್ನು ಕಡಿಮೆ ಮಾಡುವುದು, ತಪ್ಪು ಜಾಹೀರಾತು ನೀಡುವುದು ತಪ್ಪೆಂದು ಹೇಳಿದೆ. ತಪ್ಪಿದಲ್ಲಿ ಇಪ್ಪತ್ತೈದು ಸಾವಿರದಿಂದ ಹತ್ತು ಲಕ್ಷ ರೂಪಾಯಿ ತನಕ ದಂಡ, ಆರೇಳು ತಿಂಗಳು ಜೀವಾವಧಿ ಶಿಕ್ಷೆ ವಿಧಿಸಿದೆ. ಇವೆಲ್ಲಾ ಪಾಲನೆ ಆಗುವುದು ಯಾವಾಗ?
              ಆಹಾರ ಕ್ರಮ, ಜೀವನ ಶೈಲಿಯಲ್ಲಿ ಮಾರ್ಪಾಡು, ಯೋಚನೆಗಳು ಮತ್ತು ಸಮಸಾಮಯಿಕ ವಿಚಾರಗಳ ಅರಿವನ್ನು ಪಡೆಯುವುದು ಅನಿವಾರ್ಯ. ಬಹುತೇಕ ಬಂದಿಗೆ ಕಲಬೆರಕೆ, ವಿಷಗಳ ಗಾಢತೆ ಗೊತ್ತಿದೆ. ಗಂಭೀರವಾಗಿ ಯೋಚಿಸಲು ಕಾಂಚಾಣದ ನಾದವು ಬಿಡುತ್ತಿಲ್ಲ. ಎಲ್ಲಿಯ ವರೆಗೆ ಆಹಾರದ ನಿರ್ಲಿಪ್ತತೆ ಇರುತ್ತದೋ ಅಲ್ಲಿಯ ವರೆಗೆ ಕಲಬೆರಕೆ ಮಾಡುವವರು ಮಗ್ಗುಲಲ್ಲೇ ಇರುತ್ತಾರೆ. ವಿಷ ಹಾಕುವವರು ನೆರೆಮನೆಯಲ್ಲೇ ಇರುತ್ತಾರೆ. ನಮ್ಮ ಮಕ್ಕಳ ಆರೋಗ್ಯ ಸ್ವಾಸ್ಥ್ಯಕ್ಕಾದರೂ ಆಹಾರ ಕ್ರಮಗಳಲ್ಲಿ ಮಾರ್ಪಾಡು ಅಗತ್ಯ. ಹೇಗೆಂಬುದು ನಂನಮ್ಮ ವಿವೇಚನೆಗೆ ಬಿಟ್ಟದ್ದು. ಯಾಕೆಂದರೆ ಅನುಸರಿಸುವ ಮಾದರಿಗಳು ಇಲ್ಲ. ಕತ್ತಲೆಯಲ್ಲಿ ಬೆಳಕನ್ನು ಅರಸಲು ಕಾನೂನು ಸಹಾಯ ಮಾಡದು.

ಚಿತ್ರ : ನೆಟ್
( ನೆಲದನಾಡಿ/ಉದಯವಾಣಿ/23-7-2015 ಪ್ರಕಟ)

Monday, July 6, 2015

ಹಲಸಿಗೆ ವ್ಯಾಪಕ ಮುಂಭಡ್ತಿ

              ಐದಾರು ದಶಕದ ಹಿಂದಿನ ಸ್ಥಿತಿಯನ್ನು ಕೃಷಿಕ ಅಡ್ಕ ಗೋಪಾಲಕೃಷ್ಣ ಭಟ್ ನೆನಪಿಸಿಕೊಂಡರು, "ತುತ್ತಿಗೆ ತತ್ವಾರದ ದಿನಗಳಲ್ಲಿ ಎರಡು ಸೌಟು ಗಂಜಿಯೊಂದಿಗೆ ಹೆಚ್ಚೇ ಹಲಸಿನ ಪಲ್ಯವನ್ನು ಸೇರಿಸಿಕೊಂಡು  ಹೊಟ್ಟೆ ತುಂಬಿಸುತ್ತಿದ್ದೆವು. ಮಧ್ಯಾಹ್ನ ಅತಿಥಿಗಳು ಬಂದಾಗ ಊಟದ ಮೊದಲು ಹಲಸಿನ ಹಣ್ಣಿನ ಸಮಾರಾಧನೆ. ಬಂದವರ ಅರ್ಧ ಹೊಟ್ಟೆ ತುಂಬಿತೋ, ನಂತರವಷ್ಟೇ ಭೋಜನ. ಹಲಸಿನ ಸೀಸನ್ ಮುಗಿಯುವಾಗ ಸಂಕಟವಾಗುತ್ತಿತ್ತು."
             2015 ಜೂನ್ 14. ಬಿ.ಸಿ.ರೋಡು (ದ.ಕ.) ಶ್ರೀನಿವಾಸ್ ರೆಸಿಡೆನ್ಸಿಯಲ್ಲಿ ಹಲಸಿನ ಸವಿಯೂಟ. ಇಪ್ಪತ್ತೆಂಟು ವಿಧದ ಹಲಸಿನ ಖಾದ್ಯಗಳು. 199 ರೂಪಾಯಿ ಶುಲ್ಕ ನೀಡಿ ನೂರಾರು ಹಲಸು ಪ್ರಿಯರು ಭಾಗವಹಿಸಿದ್ದರು. ಸವಿಯೂಟ ಸವಿದು ತೇಗಿದರು. ಕಬಾಬ್, ಮಂಚೂರಿಯನ್, ಹಲ್ವ, ಐಸ್ಕ್ರೀಮ್... ಇತ್ಯಾದಿ. ಗಂಜಿಯ ಬಟ್ಟಲಿಂದ ಹೋಟೆಲ್ ಟೇಬಲಿಗೆ ಹಲಸು ಏರಿದುದರ ಹಿಂದೆ ದಶಕದ ಅಜ್ಞಾತ ಶ್ರಮವಿದೆ.
              2002ರಲ್ಲಿ ಸಾಗರ ತಾಲೂಕಿನ ಕೆಳದಿಯಲ್ಲಿ ಮೊದಲ ಹಲಸು ಮೇಳ ಜರುಗಿತು. ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರದ ಆಯೋಜನೆ. ನಿರ್ದಿಷ್ಟವಾದ ಕಾರ್ಯಯೋಜನೆ ಇರಲಿಲ್ಲವಾದರೂ ಆ ಭಾಗದ ವಿವಿಧ ತಳಿಗಳು ಒಂದೆಡೆ ಸೇರಿದುವು. ಮಾತುಕತೆ ಆರಂಭವಾದುವು. ಐದಾರು ವರುಷ ಬಳಿಕ ಪ್ರಥಮವಾಗಿ ಕೇರಳದ ವಯನಾಡಿನ ಉರವು ಸಂಸ್ಥೆಯು ಮೇಳದ ಸ್ವರೂಪ ನೀಡಿದರೆ, ಕನ್ನಾಡಿನಲ್ಲಿ ಬೈಫ್ ಉತ್ಸವವಾಗಿ ಆಚರಿಸಿತು. ಆ ಬಳಿಕ ಮೇಳಗಳ ಮಾಲೆ. ಈ ವರೆಗೆ ಏನಿಲ್ಲವೆಂದರೂ ಎಪ್ಪತ್ತೈದಕ್ಕೂ ಮಿಕ್ಕಿ ಮೇಳಗಳು ಸಂಪನ್ನವಾಗಿರಬಹುದು. ದೂರದ ಮಿಜೋರಾಂ, ಮಹಾರಾಷ್ಟ್ರದ ದಾಪೋಲಿ, ತಮಿಳುನಾಡಿನಲ್ಲೂ ಕೂಡಾ.
             ಬೆಂಗಳೂರು ವಿಶ್ವವಿದ್ಯಾನಿಲಯದ ಆಗಿನ ಉಪಕುಲಪತಿ ಡಾ.ನಾರಾಯಣ ಗೌಡರ ಮುಂದಾಳ್ತನದಲ್ಲಿ ವಿವಿಯ ಒಳಗೆ ಹಲಸಿನ ಪರಿಮಳ ಹಬ್ಬಿತು. ತೂಬುಗೆರೆ ಹಲಸು ಬೆಳೆಗಾರರ ಸಂಘ ಸ್ಥಾಪನೆಯಾಯಿತು. ವಿವಿ ಆವರಣದಲ್ಲಿ ಸೆಮಿನಾರು, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನಗಳು ಏರ್ಪಾಡಾದುವು. ಲಾಲ್ಭಾಗಿನಲ್ಲಿ ಹಲಸಿನ ಮಾರಾಟಕ್ಕೆ ವ್ಯವಸ್ಥೆಯಾಯಿತು. ಕೃಷಿಕರಿಗೆ ಬಿಸಾಕು ದರದ ಬದಲಾಗಿ ಉತ್ತಮ ವರಮಾನ ಬರಲು ಆರಂಭವಾಯಿತು.
               ಮೇಳಗಳು ಮೂಡಿಸಿದ ಭರವಸೆಯ ಹಿಂದೆ ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಶ್ರಮವಿದೆ. ಹಲಸು ಆಂದೋಳನವನ್ನು ಹುಟ್ಟುಹಾಕಿದ ಪತ್ರಿಕೆಯು ದೇಶವಲ್ಲ, ವಿದೇಶಿ ಹಲಸು ಪ್ರಿಯರ ಕದವನ್ನೂ ತಟ್ಟಿದೆ. ಹೊಸ ವಿಚಾರಗಳ ತುಣುಕುಗಳನ್ನು ಜಾಲತಾಣಗಳ ಗುಂಪುಗಳ, ಮಿಂಚಂಚೆ ಮೂಲಕ ವಿನಿಮಯ. ಕನ್ನಡೇತರ ಭಾಷೆಗಳನ್ನು ತಲಪಿದ್ದು ಹೀಗೆ. ಹೊಸ ತಳಿ, ಉತ್ಪನ್ನಗಳ ಸುಳಿವು ಸಿಕ್ಕಾಗ ಬೆನ್ನೇರಿ ಮಾಹಿತಿ ಕಲೆ ಹಾಕುವ ನಿರಂತರ ಕೆಲಸಗಳು. ಇದರಿಂದಾಗಿ ಹಲಸಿನ ಕೆಲಸಗಳು ಮತ್ತು ಅಂತಹ ಸಂಘಟನೆ, ವ್ಯಕ್ತಿಗಳನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಾ ಬಂತು.
                ಮೇಳಗಳಲ್ಲಿ ಮೊದಲಿಗೆ ಹಪ್ಪಳ, ಚಿಪ್ಸ್ನಂತಹ ಸಾಂಪ್ರದಾಯಿಕ ಉತ್ಪನ್ನಗಳೇ ಪ್ರದರ್ಶನಗಳಲ್ಲಿ ಕಂಡು ಬಂದುವಷ್ಟೇ. ಹೊಸಹೊಸ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿರಲಿಲ್ಲ. ಹಲಸಿನ ಮೌಲ್ಯವರ್ಧನೆ ನಕ್ಷೆಯಲ್ಲಿ ಭಾರತ ಇಲ್ಲ. ದೇಶದಲ್ಲಿ ಇಂದು ಕಿಂಚಿತ್ತಾದರೂ ಮೌಲ್ಯವರ್ಧನೆ ನಡೆಯುತ್ತಿರುವುದು ಮಹಾರಾಷ್ಟ್ರ, ಕೀರ್ನಾಟಕ, ಕೇರಳ ರಾಜ್ಯಗಳಲ್ಲಿ. ಹಲಸಿನ ಸಾಮೂಹಿಕ ಜಾಗೃತಿ ಮೂಡಿಸುವಲ್ಲಿ ಕೇರಳ ಉಳಿದೆರಡು ರಾಜ್ಯಗಳನ್ನೂ ತುಂಬ ಹಿಂದೆ ಹಾಕಿದೆ.
            ವಯನಾಡಿನ ಎಡವಗ ಪಂಚಾಯತ್ ಹಲಸಿನ ಮೌಲ್ಯವರ್ಧನೆಗೆ ದೊಡ್ಡ ಅಡಿಗಟ್ಟು ಹಾಕಿತ್ತು. ಸ್ಥಳೀಯರನ್ನು ಒಳಗೊಳ್ಳುವ ಹಲಸಿನ ಉತ್ಪನ್ನ ತಯಾರಿ ಮತ್ತು ಬಿಕರಿ ವ್ಯಾಪಕವಾದ 'ಕೃಷಿಕ ಆತ್ಮಹತ್ಯೆಯನ್ನು ತಡೆಯುವ ಉಪಾಯ' ಎಂದೂ ಪಂಚಾಯತಿಗೆ ಮನದಟ್ಟಾಗಿದೆ. ಯಾವುದೋ ಕಾರಣದಿಂದ ಯೋಜನೆಯು ಕಾರ್ಯಗತವಾಗಿಲ್ಲ. 'ಹಲಸು ಬದುಕಿನ ಶಾಕ್ ಅಬ್ಸೋರ್ಬರ್' ಎಂದು ಡಾ.ನಾರಾಯಣ ಗೌಡರು ಆಗಾಗ್ಗೆ ಹೇಳುತ್ತಿರುತ್ತಾರೆ. ನಡುವಿಲ್ ಎಂಬ ಹಳ್ಳಿಮೂಲೆಯ ಪಂಚಾಯತ್ ಉತ್ಸವ ಮಾಡುವ ಮೂಲಕ ಗಮನ ಸೆಳೆದಿದೆ.
               ಈಚೆಗೆ ಕಣ್ಣೂರು ಸನಿಹದ ತಳಿಪರಂಬದಲ್ಲಿ ಹಲಸಿನ ಮೌಲ್ಯವರ್ಧನೆಗಾಗಿಯೇ ಆರ್ಟೋಕಾರ್ಪಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹುಟ್ಟಿದೆ. ವರಟ್ಟಿ, ಚಿಪ್ಸ್ಗಳಲ್ಲದೆ ಹಲಸಿನ ಬೀಜದ ಹುಡಿ, ಸೊಳೆಯ ಹುಡಿ, ಪಲ್ಪ್.. ಸಿದ್ಧ ಮಾಡುವ ಈ ಸಂಸ್ಥೆಗೆ ಉತ್ತಮ ಪ್ರತಿಕ್ರಿಯೆ. "ಕೇರಳವು ಹಲಸಿನ ಬಳಕೆಯಲ್ಲಿ, ಮೌಲ್ಯವರ್ಧನೆಯಲ್ಲಿ ಮುಂದು. ಸಮಾಜದ ವಿವಿಧ ವರ್ಗದವರಲ್ಲಿ ಉತ್ಸವಗಳು ಹೊಸ ಉತ್ಸಾಹ ಮೂಡಿಸಿದೆ. ಇಪ್ಪತ್ತಕ್ಕೂ ಮಿಕ್ಕಿ ಗುಂಪುಗಳು ಸಕ್ರಿಯವಾಗಿವೆ. ಒಂದು ಹಲಸಿನ ಹಣ್ಣು/ಕಾಯಿಂದ ಒಂದು ಸಾವಿರ ರೂಪಾಯಿ ಟರ್ನ್ ಓವರ್ ಗಳಿಸಬಹುದೆನ್ನುವ ವಿಶ್ವಾಸ ಬಂದಿದೆ" ಎನ್ನುತ್ತಾರೆ ಹಿರಿಯ ಪತ್ರಕರ್ತ ಶ್ರೀ ಪಡ್ರೆ.
                ಕೇರಳದ ಪಾಲಕ್ಕಾಡಿನ ಪೇಯೆಸ್ಸೆಸ್ಪಿ ಕಳೆದ ವರ್ಷ ಆರು ಟನ್ ಹಲಸಿನ ಕಾಯಿಸೊಳೆ ಒಣಗಿಸಿ ಮಾರಿದೆ. ಕನ್ನಾಡಿನ ಶಿರಸಿಯಲ್ಲಿ ವಿನುತ ಪರಮೇಶ್ವರ ಹೆಗಡೆ ಐದು ವರುಷದಿಂದ ಹಲಸಿನ ಹಣ್ಣಿನ ಬಾರ್ ತಯಾರಿಸುತ್ತಿದ್ದಾರೆ. ಇದುವರೆಗೆ ಮೂರು ಟನ್ ಬಾರ್ ತಯಾರಿಸಿ ಮಾರುಕಟ್ಟೆಗೆ ಒದಗಿಸಿದ ಇವರನ್ನು ಈಚೆಗೆ ಸನ್ಮಾನಿಸಿದ್ದಾರೆ. ಇದನ್ನು ಶಿರಸಿಯ ಕದಂಬ ಸಂಸ್ಥೆಯು ಮಾರುಕಟ್ಟೆ ಮಾಡುತ್ತಿದೆ. ಶಿರಸಿಯಲ್ಲಿ ಚಿಪ್ಸ್ ಉದ್ಯಮ ಬೆಳೆಸಿರುವ ಜೈವಂತ್ ಗಣೇಶ್ ವರ್ಷದ ಏಳು ತಿಂಗಳ ಕಾಲ ದಿನಕ್ಕೆ ಒಂದು ಟನ್ ಚಿಪ್ಸ್ ತಯಾರಿಸುತ್ತಿದ್ದಾರೆ!
                 ಈಚೆಗೆ ಉ.ಕ. ಜಿಲ್ಲೆಯ ಕುಮಟಾದಲ್ಲಿ ಶಿರಸಿಯ ಕದಂಬ ಸಂಸ್ಥೆಯು ಹಲಸಿನ ಮೇಳವನ್ನು ಸಂಘಟಿಸಿತ್ತು. ಸುಮಾರು ಅರುವತ್ತು ಮಂದಿ ಹೆಣ್ಮಕ್ಕಳು ಖಾದ್ಯಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೇಳಕ್ಕಾಗಿಯೇ ಹೈದ್ರಾಬಾದಿನ 'ತಿನ್ಲೇ' ಸಂಸ್ಥೆಯು ಪ್ರಾಯೋಗಿಕವಾಗಿ ತಯಾರಿಸಿದ ಹಲಸಿನ ಸಾಂಬಾರು, ಪಾಯಸ, ಜಾಮೂನು, ಶೀರಾವನ್ನು ಬಾಟಲುಗಳಲ್ಲಿ ಪ್ರದರ್ಶನಕ್ಕಿಟ್ಟಿತ್ತು. "ಈ ಉತ್ಪನ್ನಗಳಿಗೆ ಯಾವುದೇ ಸಂರಕ್ಷಕಗಳನ್ನು ಬಳಸಿಲ್ಲ. ಆರು ತಿಂಗಳು ತಾಳಿಕೆ. ಇಂತಹ ತಕ್ಷಣ ಬಳಸಬಹುದಾದ ಉತ್ಪನ್ನ ಮಾಡಬಹುದೆಂದು ತೋರಿಸಲು ನಾವಿದನ್ನು ಮಾಡಿತಂದಿದ್ದೇವೆ" ಎನ್ನುತ್ತಾರೆ ಬ್ರಹ್ಮಾವರ ಮೂಲಕ ಸಂಸ್ಥೆಯ ಶ್ರೀಕಾಂತ್ ಭಟ್.
                      ದಕ್ಷಿಣ ಭಾರತದಲ್ಲಿ ದೊಡ್ಡ, ಸಣ್ಣ ಮಟ್ಟದ ಉದ್ಯಮಗಳು ಸೇರಿದಂತೆ ಮೂವತ್ತಕ್ಕೂ ಮಿಕ್ಕಿದ ಕಂಪೆನಿಗಳು ಹಲಸಿನ ಹಣ್ಣಿನ ಐಸ್ಕ್ರೀಮ್ ತಯಾರಿಸುತ್ತಿರುವುದು ಗಮನಾರ್ಹ. ಕಳೆದೈದು ವರುಷದಲ್ಲಿ ಚಿಕ್ಕಪುಟ್ಟ ಪೇಟೆ, ಪಟ್ಟಣಗಳಲ್ಲೂ ಗ್ರಾಹಕರು ರೂಪುಗೊಂಡಿದ್ದಾರೆ. ಹಲಸಿನ ಮೌಲ್ಯವರ್ಧನೆಯ ಸಾಧ್ಯತೆಗಳು ಅಗಣಿತ. ಮೌಲ್ಯವರ್ಧನೆಯಲ್ಲಿ ಗುಣಮಟ್ಟ, ಬ್ರಾಂಡಿಂಗ್, ನೋಟ, ಪ್ಯಾಕಿಂಗ್.. ಮೊದಲಾದ ಮಾರುಕಟ್ಟೆ ಜಾಣ್ಮೆಗಳಲ್ಲಿ ಸುಧಾರಿಸಬೇಕಾಗಿದೆ. ಬೆಂಗಳೂರಿನ ಎಡಬಲದ ಐದಾರು ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಐನೂರು ಎಕ್ರೆ ಹಲಸಿನದೇ ತೋಪುಗಳು ಮೇಲಕ್ಕೇಳುತ್ತಿದೆ.
                ಸಮಸ್ಯೆಗಳೂ ಬೆಟ್ಟದಷ್ಟಿವೆ. ಎಲ್ಲವೂ ಸುಗಮ ಎನ್ನುವಂತಿಲ್ಲ. ಉತ್ಪನ್ನ ತಯಾರಿಸಲು ಸಿದ್ಧ ತಂತ್ರಜ್ಞಾನವಿಲ್ಲ. ಶ್ರಮ ಉಳಿಸುವ ಉಪಕರಣಗಳ ಆವಿಷ್ಕಾರವಾಗಿಲ್ಲ. ಉದ್ದಿಮೆಗಳ ಸಮಸ್ಯೆಗಳಿಗೆ ಪರಿಹಾರ ಹೇಳುವವರಿಲ್ಲ. ಮೌಲ್ಯವರ್ಧನೆಗೆ ವ್ಯವಸ್ಥಿತ ತರಬೇತಿ ನೀಡುವ ಸಂಸ್ಥೆಗಳಿಲ್ಲ. ಮರದಿಂದ ಕಾಯಿ ಇಳಿಸುವುದು ಕಷ್ಟ. ಹಲಸಿನ ರಾಶಿಯಲ್ಲಿ ಉತ್ತಮ ಹಣ್ಣನ್ನು ಆಯ್ಕೆ ಮಾಡುವ ವ್ಯವಸ್ಥೆ.. ಹೀಗೆ ಹತ್ತಾರು 'ಬೇಕು'ಗಳಿವೆ. ಕಸಿ ಗಿಡಗಳಿಗೆ ಬೇಡಿಕೆ ಯಥೇಷ್ಟವಾಗಿದ್ದರೂ, ಕಸಿಯು ಸಂಕೀರ್ಣವಾದ ಕಾರಣ ಪೂರೈಕೆ ಕಡಿಮೆ.
                 ಐದಾರು ವರುಷಗಳ ಹಲಸಿನ ಆಂದೋಳನದಲ್ಲಿ ಮೂಡಿಬಂದ ಯಶೋಗಾಥೆಗಳು ನೂರಾರು, ಅಲ್ಲ-ಸಾವಿರಾರು. ಈಗ ಆಗಿರುವ ಮೌಲ್ಯವರ್ಧನೆ ಕೆಲಸಗಳೆಲ್ಲಾ ಹಲಸಿನಲ್ಲಿ ಪ್ರೀತಿ ಇರುವ ಮಂದಿಯಿಂದಷ್ಟೇ ಆಗಿದೆ. ಇಷ್ಟು ದೊಡ್ಡ ದೇಶದಲ್ಲಿ ಎರಡು ಕೃಷಿ ವಿಜ್ಞಾನ ಕೇಂದ್ರ ಮತ್ತು ಎರಡು ಕೃಷಿ ವಿಶ್ವವಿದ್ಯಾಲಯಗಳು ಮಾತ್ರ ಹಲಸಿನ ಕೆಲಸ ಮಾಡುತ್ತಿವೆ. ಮಿಕ್ಕಂತೆ ಸರಕಾರದ ಕೃಷಿ ಪೂರಕ ಇಲಾಖೆಗಳು ಹೃತ್ಪೂರ್ವಕವಾಗಿ ಸ್ಪಂದನ ನೀಡಿದ್ದು ಕಡಿಮೆ.
                    ಇದುವರೆಗೆ ಜರುಗಿದ ಮೇಳಗಳಿಗೆ ಬಂದ ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟವಾಗದೆ ಹಿಂದೆಹೋದ ದೃಷ್ಟಾಂತ ಇಲ್ಲವೇ ಇಲ್ಲ. ಉತ್ಪನ್ನವನ್ನು ಕೊಂಡುಕೊಳ್ಳಲು ಗ್ರಾಹಕರು ತುದಿಗಾಲಲ್ಲಿದ್ದಾರೆ. ಪೂರೈಕೆ ಸರಪಳಿ ವಿಸ್ತರಿಸಬೇಕು. ವರುಷದ ಹನ್ನೆರಡು ತಿಂಗಳೂ ಹಲಸಿನ ಉತ್ಪನ್ನ ಸಿಗುವಂತಹ ತಂತ್ರಜ್ಞಾನಗಳು ಮೊದಲಾದ್ಯತೆಯಲ್ಲಿ ಆಗಬೇಕು.
                ಐದಾರು ವರುಷದ ಆಂದೋಳನದ ಫಲಶ್ರುತಿಯಾಗಿ ಹಿತ್ತಿಲಿನ ಹಲಸು ಬಟ್ಟಲಿಗೆ ಬಂದಿದೆ. ಕೇಳುವವರೇ ಇಲ್ಲದ ಹಲಸನ್ನು ಚರಿತ್ರೆಯಲ್ಲೇ ಮೊತ್ತಮೊದಲ ಬಾರಿ ಮಾರಿ ಅಷ್ಟಿಷ್ಟು ಗಳಿಸಿದ ಕೃಷಿಕರಿದ್ದಾರೆ. ಫ್ರೀಝ್ ಡ್ರೈ ಹಲಸನ್ನು ಹೊರತಂದ ಕೇರಳದ ಜೇಮ್ಸ್ ಜೋಸೆಫ್ ಅವರ ಅವಿರತ ಯತ್ನದಿಂದ ಹಲಸು ಪಂಚತಾರಾ ಹೋಟೆಲುಗಳನ್ನೂ ಪ್ರವೇಶಿಸಿದೆ. ಅಲ್ಲೂ ಗೌರವದ ಸ್ಥಾನ ಪಡೆಯುತ್ತಿದೆ.


(ಉದಯವಾಣಿಯ ನೆಲದ ನಾಡಿ ಕಾಲಂನಲ್ಲಿ 2-7-2015ರಂದು ಪ್ರಕಟ)


Thursday, June 25, 2015

ಜಿಹ್ವಾಚಾಪಲ್ಯ ವೃದ್ಧಿಸುವ ರುಚಿವರ್ಧಕ

               ಬಸ್ಸಿನ ಮುಂದಿನ ಆಸನದಲ್ಲಿದ್ದ ಅಡುಗೆ ವಿಶೇಷಜ್ಞರ ಮಾತಿಗೆ ಕಿವಿಯೊಡ್ಡಬೇಕಾದ ಪ್ರಮೇಯ ಬಂತು. ಅವರಿಬ್ಬರು ದೊಡ್ಡ ಸಮಾರಂಭಗಳ ಅಡುಗೆಯ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿಗಳೆಂದು ಅರಿತುಕೊಂಡೆ. ಒಬ್ಬರೆಂದರು, "ಮೊನ್ನೆ ಎರಡು ಸಾವಿರ ಮಂದಿಯ ಅಡುಗೆಗೆ ಶಹಬ್ಬಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಯಾವಾಗಲೂ ಹಾಕುವುದಕ್ಕಿಂತ ಸ್ವಲ್ಪ ಹೆಚ್ಚೇ ಟೇಸ್ಟ್ ಮೇಕರ್ ಹಾಕಿದ್ದೆ", ಎಂದಾಗ ಇನ್ನೊಬ್ಬರು ದನಿ ಸೇರಿಸಿದರು, "ಅಂಗಡಿಯಲ್ಲಿ ಟೇಸ್ಟ್ ಮೇಕರ್ ಅಂತ ಕೇಳಿದ್ರೆ ಆಯಿತು, ಏನೋ ಬಿಳಿ ಪುಡಿ ಕೊಡ್ತಾರೆ. ಅದು ಎಂತಾದ್ದು ಅಂತ ಗೊತ್ತಿಲ್ಲ. ಈಚೆಗೆ ಎಲ್ಲರೂ ಹಾಕ್ತಾರೆ, ನಾನ್ಯಾಕೆ ಹಾಕಬಾರ್ದು? ಆ ಪುಡಿ ಹಾಕಿದರೆ ಸಾರು, ಸಾಂಬಾರಿನ ರುಚಿಯೇ ಬೇರೆ. ಯಾರಿಗೂ ಗೊತ್ತಾಗಬಾರದಷ್ಟೇ."
                ದಂಗಾಗುವ ಸರದಿ ನನ್ನದು. ಹೋಟೆಲ್, ಉದ್ಯಮಗಳಲ್ಲಿ ರುಚಿವರ್ಧಕಯೆನ್ನುವ ರಾಸಾಯನಿಕ  ಬಳಸುವುದನ್ನು ಕಿವುಡಾಗಿ, ಕುರುಡಾಗಿ ಒಪ್ಪಿಕೊಂಡಾಗಿದೆ. ಸಮಾರಂಭಗಳಿಗೆ ಉಣಿಸುವ ಅಡುಗೆ ಸೂಪಜ್ಞರು ಕೂಡಾ ಬಳಸುತ್ತಾರೆನ್ನುವುದು (ಎಲ್ಲರೂ ಅಲ್ಲ) ಇಂದಷ್ಟೇ ತಿಳಿಯಿತು. ಸಮಾರಂಭಗಳು ಅಧಿಕವಾಗುತ್ತಾ ಬಂದ ಹಾಗೆ ಸೂಪಜ್ಞರಲ್ಲೂ ತಮ್ಮದೇ ಕೈರುಚಿ ಮೇಲುಗೈಯಾಗಬೇಕೆನ್ನುವ ಪೈಪೋಟಿ. ಒಂದು ಸಮಾರಂಭದಲ್ಲಿ ಅಡುಗೆ ಸೈ ಎನಿಸಿದರೆ ಮತ್ತೊಂದು ಅಡುಗೆ ಹುಡುಕಿಕೊಂಡು ಬರುತ್ತದೆ. ಇದಕ್ಕಾಗಿ ಸೂಪಜ್ಞರು ಪಾಲಿಸುವ ಉಪಾಯ - ಅಡುಗೆಗೆ ಟೇಸ್ಟ್ ಮೇಕರ್ ಬಳಕೆ.  ಈ ರುಚಿವರ್ಧಕವನ್ನು ಮನೆಯ ಯಜಮಾನನ ಗಮನಕ್ಕೆ ತಾರದೇ ಸ್ವತಃ ಒಯ್ಯುತ್ತಾರೆ. ಬಳಸುತ್ತಾರೆ.
                ಸಮಾರಂಭಗಳಲ್ಲಿ ಐನೂರು, ಸಾವಿರ, ಎರಡು ಸಾವಿರ ಮಂದಿಗೆ ಅಡುಗೆ ಮಾಡಬೇಕೆಂಬಾಗ ತರಕಾರಿ, ಜೀನಸುಗಳಿಗೆ ಸಹಜವಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕು. ಮಾರುಕಟ್ಟೆಯ ತರಕಾರಿ ಅಂದಾಗ ಅದು ರಾಸಾಯನಿಕದಲ್ಲಿ ಮಿಂದೆದ್ದು ಬಂದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಕ್ಕಿಯಿಂದ ಉಪ್ಪಿನ ತನಕ ಸಾಚಾತನಕ್ಕೆ ಪ್ರತ್ಯೇಕ ಪರೀಕ್ಷೆ ಬೇಕಾಗುವ ಕಾಲಮಾನ. ಇವುಗಳೊಂದಿಗೆ ಉದರಕ್ಕಿಳಿಯುವ ಖಾದ್ಯಗಳಿಗೂ ಈಗ ರುಚಿವರ್ಧಕದ ಸ್ಪರ್ಶ!  ಕಾರ್ಬ್ಯೆೈಡ್ ಹಾಕಿ ದಿಢೀರ್ ಹಣ್ಣು ಮಾಡಿದ ಬಾಳೆಹಣ್ಣುಗಳು ಭೋಜನದೊಂದಿಗೆ ಬೋನಸ್. ಉಚಿತವಾಗಿ ಕೊಡುವ ಐಸ್ಕ್ರೀಂನಲ್ಲಿ ಇನ್ನು ಏನೆಲ್ಲಾ ಇವೆಯೋ ಗೊತ್ತಿಲ್ಲ. ಹಾಗೆಂತ ರುಚಿವರ್ಧಕ ಬಳಸದೆ ತಮ್ಮ ಅನುಭವ ಮತ್ತು ಕೈಗುಣದಿಂದ ಶುಚಿರುಚಿಯಾದ ಭೋಜನವನ್ನು ಸಿದ್ಧಪಡಿಸುವ ಸೂಪಜ್ಞರು ಎಷ್ಟು ಮಂದಿ ಇಲ್ಲ.
                ಮ್ಯಾಗಿ ನಿಷೇಧದ ಕಾವು ದೇಶವಲ್ಲ, ವಿಶ್ವಾದ್ಯಂತ ಕಂಪನ ಮೂಡಿಸಿದೆ. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸೀಸ, ರುಚಿವರ್ಧಕವು ಉದ್ಯಮದ ಅಡಿಗಟ್ಟನ್ನು ಅಲ್ಲಾಡಿಸಿದೆ. ಕೋಟಿಗಟ್ಟಲೆ ಉತ್ಪನ್ನ ಬೆಂಕಿಗಾಹುತಿಯಾಗಿದೆ.  ಜಾಹೀರಾತುಗಳ ಮೂಲಕ ನಂಬಿಸಿದ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದೆ. ತಿನ್ನುವ ಎಲ್ಲಾ ವಸ್ತುಗಳನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ಥಿತಿ ರೂಪುಗೊಂಡಿದೆ. ಸೇಬು- ದ್ರಾಕ್ಷಿಯೊಳಗಿರುವ ರಾಸಾಯನಿಕ, ಹಾರ್ಮೋನುಗಳ ಕುರಿತು, ಕಲ್ಲಂಗಡಿಗೆ ಇಂಜೆಕ್ಟ್ ಮಾಡುವ ವಿವಿಧ ಮುಖಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ರಾಸಾಯನಿಕ ಸಿಂಪಡಣೆಗಳ ಕರಾಳ ಮುಖಗಳತ್ತ ವಿವಿಧ ಮಾಧ್ಯಮಗಳು ಬೊಬ್ಬಿಡುತ್ತಿವೆ.  ಮ್ಯಾಗಿಯಲ್ಲಿರುವ ಅಕರಾಳ ವಿಕಾರಳ ಮುಖದ ದರ್ಶನವಾದಾಗ ಈ ಎಲ್ಲಾ ವಿಚಾರಗಳತ್ತ ತಿಳಿಯಲು ಈಗಲಾದರೂ ಮೈಕೊಡವಿ ಎದ್ದೇವಲ್ಲಾ!
                   ತಮಿಳುನಾಡಿನಿಂದ ಬರುವ ತರಕಾರಿಗಳಿಗೆ ಕೇರಳ ರಾಜ್ಯವು ಅವಲಂಬಿತ. ನಿರ್ವಿಷ ಆಹಾರದ ಕುರಿತು ಕೇರಳದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಾ ಇವೆ. ಆರೋಗ್ಯ ಕಾಳಜಿಯಿದ್ದ  ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸ್ವಾವಲಂಬನೆಯತ್ತ ಹೊರಳುತ್ತಿದ್ದಾರೆ. ಕೈತೋಟಗಳನ್ನು ಎಬ್ಬಿಸುವ ಮನಃಸ್ಥಿತಿ ನಿರ್ಮಾಣವಾಗುತ್ತಿದೆ. ಮಾವು, ಹಲಸು, ಗೆಡ್ಡೆ, ಎಲೆಗಳು ತರಕಾರಿಯಾಗಿ ಉದರ ಸೇರುತ್ತಿದೆ. "ರಾಸಾಯನಿಕದ ಪರಿಣಾಮ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ಹೊರ ರಾಜ್ಯಗಳಿಂದ ತರಕಾರಿಯನ್ನು ತರಿಸದೇ ಇರಲು ಕೆಲವು ವ್ಯಾಪಾರಿಗಳು ನಿರ್ಧರಿಸಿದ್ದಾರೆ," ಎನ್ನುತ್ತಾರೆ ಕಾಸರಗೋಡಿನ ಕೃಷಿಕ ಗೋಪಾಲ ರಾವ್.
                     ಮುಖ್ಯವಾಗಿ ಟೊಮೆಟೋ, ದೊಣ್ಣೆಮೆಣಸು, ಕ್ಯಾಬೇಜ್, ಹೂಕೋಸುಗಳಿಗೆ ಸುಮಾರು ಹತ್ತಕ್ಕೂ ಹೆಚ್ಚು ಬಾರಿ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ ಎಂದು ಕೃಷಿಕ ಮಿತ್ರರನೇಕರು ಹೇಳಿಕೊಂಡಿದ್ದಾರೆ. ಯಾವ್ಯಾವ ಕೃಷಿಗೆ ಎಂತಹ ವಿಷವನ್ನು ಸಿಂಪಡಣೆ ಮಾಡಬೇಕೆಂದು ಅಂಗಡಿಯಾತನೇ ಬೋಧನೆ ಮಾಡುತ್ತಾನೆ. ಕೊನೆಗೆ ಎಷ್ಟು ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕೆಂಬ ಡೋಸೇಜನ್ನೂ ಹೇಳುತ್ತಾರೆ. ಇಂತಹ ವ್ಯವಹಾರವನ್ನು ಕಣ್ಣಾರೆ ನೋಡಿದ ಬಳಿಕ ಈ ನಾಲ್ಕು ಉಗ್ರರಿಗೆ ನಾನಂತೂ ವಿದಾಯ ಹೇಳಿದ್ದೇನೆ!
                  ಕನ್ನಾಡಿನಲ್ಲಿ ಸಾವಯವದ ಅರಿವು ಈಗಲ್ಲ ದಶಕದೀಚೆಗೆ ಪ್ರಚಾರವಾಗುತ್ತದಷ್ಟೇ ಹೊರತು ಅದು ಮನಸ್ಸಿಗೆ ಇಳಿದಿರುವುದು ತೀರಾ ಕಡಿಮೆ. ಆಹಾರದಲ್ಲಿ ವಿಷದ ಪ್ರಮಾಣಗಳು ಪತ್ತೆಯಾಗುತ್ತಲೇ ಇದ್ದಂತೆ ನಿರ್ವಿಷ ಆಹಾರಗಳ ಹುಡುಕಾಟದತ್ತ, ಬೆಳೆಯುವತ್ತ ಯೋಜನೆ, ಯೋಚನೆಗಳು ಹೆಜ್ಜೆಯೂರಿವೆ. ಸಮಾನಾಸಕ್ತ ಸಂಘಟನೆಗಳು ನಗರಗಳಲ್ಲಿ ಸಾವಯವದ ಮಹತ್ವ, ನಿರ್ವಿಷ ಆಹಾರದ ಅಪಾಯಗಳತ್ತ ಅರಿವು ಚೆಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಪಾಲಿಶ್ ಮಾಡದ ಅಕ್ಕಿಯನ್ನು ಅರಸಿ ಬರುವ, ವಿಳಾಸ ಕೇಳುವ ಅಮ್ಮಂದಿರು ಎಚ್ಚರವಾಗಿದ್ದಾರೆ. ಮ್ಯಾಗಿ ನಿಷೇಧದ ಬಳಿಕವಂತೂ ಇಂತಹ ಪ್ರಕ್ರಿಯೆ ತೀವ್ರವಾಗಿದೆ.
                    ಮೂಲಿಕಾ ತಜ್ಞ ಪಾಣಾಜೆಯ ವೆಂಕಟ್ರಾಮ ದೈತೋಟ ಎಚ್ಚರಿಸುತ್ತಾರೆ, "ನಿರ್ವಿಷ ಆಹಾರದ ಕಾಳಜಿ ಎಲ್ಲಿಯವರೆಗೆ ನಮಗೆ ಬರುವುದಿಲ್ಲವೋ ಅಲ್ಲಿಯವರೆಗೆ ಖಾಯಿಲೆಗಳು ತಪ್ಪಿದಲ್ಲ. ಆಹಾರವೇ ಔಷಧಿಯಾಗಬೇಕು. ಈಗೆಲ್ಲವೂ ತಿರುಗುಮುರುಗು. ರಾಸಾಯನಿಕ ರಹಿತವಾದ ಆಹಾರದ ಸೇವನೆಯಿಂದ ಕಾಯಿಲೆಗಳನ್ನು ದೂರವಿಡಬಹುದು." ವೆಂಕಟ್ರಾಮದ ಕಿವಿಮಾತಿಗೆ ನಮ್ಮ ಹಿರಿಯರ ಬದುಕು ಆದರ್ಶವಾಗಿತ್ತು.
                ವಿವಿಧ ರೂಪಗಳಲ್ಲಿ ರಾಸಾಯನಿಕಗಳನ್ನು ಗೊತ್ತಿಲ್ಲದೆ ಬದುಕಿನಂಗವಾಗಿ ಸ್ವೀಕರಿಸಿದ್ದೇವೆ. ಗೊತ್ತಾದ ಬಳಿಕ ದೂರವಿರುವುದರಲ್ಲಿ ಆರೋಗ್ಯ ಭಾಗ್ಯ. ತಕ್ಷಣ ಎಲ್ಲವನ್ನೂ ವಜ್ರ್ಯ ಮಾಡಲಸಾಧ್ಯ. ಹಂತ ಹಂತವಾಗಿ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಒಂದಷ್ಟು ದಿವಸ ಹೆಚ್ಚು ಬಾಳಬಹುದೇನೋ? ನಿರ್ವಿಷವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದುಕೊಡುವ ಕೃಷಿಕರನ್ನು ಪ್ರೋತ್ಸಾಹಿಸೋಣ.